ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಅಧಿಸೂಚನೆ ವಿಳಂಬದಿಂದ ಸ್ಥಗಿತಗೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಯೋಜನೆಯ ಪ್ರಗತಿ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಶಿವಕುಮಾರ್, 2013ರಿಂದಲೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೆ ಬಾಕಿ ಉಳಿಸಿಕೊಂಡಿರುವುದೇ ಪ್ರಮುಖ ಅಡೆತಡೆ ಎಂದು ಹೇಳಿದ್ದಾರೆ. ಯೋಜನೆಗೆ ಮೊದಲ ಬಾರಿ ಮಹಾರಾಷ್ಟ್ರ ಹಾಗೂ ನಂತರ ಆಂಧ್ರ ಪ್ರದೇಶ ಅಡ್ಡಗಾಲು ಹಾಕಿವೆ ಎಂದು ತಿಳಿಸಿದ ಅವರು, ದೆಹಲಿಯಲ್ಲಿರುವ ಬಿಜೆಪಿ ನಾಯಕರ ಸಂಪರ್ಕ ಬಳಸಿ ಕೇಂದ್ರದ ಮೇಲೆ ಒತ್ತಡ ತರುವಂತೆ ಸಲಹೆ ನೀಡಿದರು.
ಅನುಮತಿ ದೊರಕಿದ ಕೂಡಲೇ ಸಾಲ ಮಾಡಿಕೊಂಡರೂ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಸರ್ಕಾರ ನಿರ್ಧರಿಸಿರುವುದಾಗಿ ಹೇಳಿದರು. ಕೇಂದ್ರ ಸಚಿವ ಸೋಮಣ್ಣ ಅವರೊಂದಿಗೆ ಮೂರು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿರುವುದನ್ನೂ ಅವರು ಸ್ಮರಿಸಿದರು.
ಖುಷ್ಕಿ ಮತ್ತು ತರಿ ಭೂಮಿಗೆ ಹೊಸ ಪರಿಹಾರ ದರ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು. ಯೋಜನೆಗಾಗಿ ವರ್ಷಕ್ಕೆ 15ರಿಂದ 20 ಸಾವಿರ ಕೋಟಿ ರೂ. ವೆಚ್ಚ ಮಾಡುವ ಯೋಜನೆಯಿದ್ದು, ಮುಂದಿನ ಮೂರು–ನಾಲ್ಕು ವರ್ಷಗಳಲ್ಲಿ ಭೂಸ್ವಾಧೀನ ಪೂರ್ಣಗೊಳಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈವರೆಗೆ 50,452 ಕೋಟಿ ರೂ. ವೆಚ್ಚ ಭರಿಸಲಾಗಿದ್ದು, ಕೆಲ ಭಾಗಗಳಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ಶಿವಕುಮಾರ್ ತಿಳಿಸಿದರು.

