ಹೊಸದಿಗಂತ ವರದಿ ಶಿರಸಿ:
ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಸಮುದ್ರ ಸೇರುವ ಬೇಡ್ತಿ ಮತ್ತು ಅಘನಾಶಿನಿಯಂತಹ ಸಣ್ಣ ನದಿಗಳ ದಿಕ್ಕು ಬದಲಿಸುವುದು ಅತ್ಯಂತ ಅತಾರ್ಕಿಕ ಮತ್ತು ಅವೈಜ್ಞಾನಿಕ ನಿರ್ಧಾರ. ಈ ಯೋಜನೆ ಮುಂದುವರಿಸಿದರೆ ಅಹಿಂಸಾತ್ಮಕವಾಗಿ ಪ್ರಭಲವಾಗಿ ಮುಂದುವರಿಯಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಎಚ್ಚರಿಸಿದರು.

ಶಿರಸಿಯಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಅವರು ಮಾತನಾಡಿದರು. ನದಿ ಜೋಡಣೆ ಮತ್ತು ತಿರುವು ಯೋಜನೆಗಳಿಂದಾಗುವ ಭೀಕರ ಪರಿಣಾಮಗಳ ಕುರಿತು ಎಚ್ಚರಿಸಿದರು. “ಬಯಲು ಸೀಮೆಯಲ್ಲಿ ನದಿಗಳ ಜೋಡಣೆ ಸುಲಭವಿರಬಹುದು, ಆದರೆ ಮಲೆನಾಡಿನ ಪರಿಸರವೇ ಬೇರೆ. ಇಲ್ಲಿನ ನೀರನ್ನು ಭಾಗಶಃ ಬೇರೆಡೆಗೆ ಒಯ್ದರೂ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಲಿದೆ. ಸ್ವರ್ಣವಲ್ಲೀ ಮಠದ ಪರಿಸರದಲ್ಲೇ ಈಗ ನೀರಿನ ಕೊರತೆ ಎದುರಾಗುತ್ತಿದೆ, ಇನ್ನು ಯೋಜನೆ ಜಾರಿಯಾದರೆ ಮರುಪೂರಣ ಸಾಧ್ಯವಾಗದೆ ಇಡೀ ಪ್ರದೇಶ ಬರಪೀಡಿತವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: FOOD | ಫಟಾಫಟ್ ಅಂತ ರೆಡಿ ಆಗುತ್ತೆ ಪಾಲಕ್ ರೈಸ್! ನೀವೂ ಒಮ್ಮೆ ಟ್ರೈ ಮಾಡಿ
ನದಿ ಜೋಡಣೆಯ ವಿರುದ್ಧದ ಈ ಹೋರಾಟವು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವಾದುದಲ್ಲ. ಇದು ಕೇವಲ ಪ್ರಕೃತಿ ಮತ್ತು ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗಿ ಅರಣ್ಯ ಅತಿಕ್ರಮಣದಾರರು ಮತ್ತೆ ಒಕ್ಕಲೆಬ್ಬಿಸಲ್ಪಡುವ ಭೀತಿಯಲ್ಲಿದ್ದಾರೆ. ದೇಶದಲ್ಲಿ ಹಲವು ನದಿ ಯೋಜನೆಗಳಿವೆ, ನಾವು ಅವುಗಳನ್ನೆಲ್ಲ ವಿರೋಧಿಸುತ್ತಿಲ್ಲ. ಆದರೆ ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುವ ಯೋಜನೆಗಳಿಗೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಡಿಪಿಆರ್ ಸಿದ್ಧಪಡಿಸಲು ವಿರೋಧ:
ಯೋಜನೆಯ ವಿಸ್ತೃತ ವರದಿ ಸಿದ್ಧಪಡಿಸುವುದನ್ನೂ ನಾವು ಬಲವಾಗಿ ವಿರೋಧಿಸುತ್ತೇವೆ. ತಜ್ಞರು ಸರ್ಕಾರದ ಪರವಾಗಿಯೇ ವರದಿ ನೀಡುವ ಸಾಧ್ಯತೆ ಇರುತ್ತದೆ. ನಮ್ಮ ಜನಪ್ರತಿನಿಧಿಗಳು ಜನರ ಭಾವನೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಅವರು ಈ ಹೋರಾಟದ ಮುಂಚೂಣಿಯಲ್ಲಿ ನಿಂತು ಜನರ ಧ್ವನಿಯಾಗಬೇಕು ಎಂದು ಕರೆ ನೀಡಿದ ಶ್ರೀಗಳು, ಇದೊಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿದ್ದು, ಸರ್ಕಾರ ನಿರ್ಧಾರ ಬದಲಿಸದಿದ್ದರೆ ಸತತವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

