ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ‘ದುಡಿಮೆಯ ಹಕ್ಕು’ ನೀಡುವ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬಡವರಿಗೆ ಆರ್ಥಿಕ ಭದ್ರತೆ ನೀಡುವ ಈ ಕಾಯಿದೆಯನ್ನು ಈಗ ‘ವಿಬಿ ರಾಮ್ ಜೀ’ ಕಾಯಿದೆ ಎಂದು ಬದಲಾಯಿಸಲಾಗಿದೆ. ಈ ಮಹತ್ವದ ಬದಲಾವಣೆ ಮಾಡುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗಾಗಲಿ ಅಥವಾ ಜನರ ಜೊತೆಗಾಗಲಿ ಯಾವುದೇ ಚರ್ಚೆ ನಡೆಸಿಲ್ಲ’ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಡಿಸೆಂಬರ್ 17ರಂದು ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಡಿ.18ರಂದು ಅಂಗೀಕಾರ ಪಡೆದಿದೆ. ಸುಮಾರು 12.16 ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ. ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ. 51.6 ಮಹಿಳೆಯರಿದ್ದಾರೆ ಎಂದು ವಿವರಿಸಿದರು.

