Wednesday, November 5, 2025

CINE | ‘ಕಾಂತಾರ:1’ ಇಷ್ಟು ಬೇಗ ಒಟಿಟಿಗೆ ಬರೋದಕ್ಕೆ ನಿರ್ಮಾಪಕರು ಕಾರಣ ಕೊಟ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿ ಸದ್ದುಮದ್ದು ಮಾಡುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇದೀಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿರುವ ಸಿನಿಮಾಗಳನ್ನು ಒಟಿಟಿಗೆ ತರಲು ನಿರ್ಮಾಪಕರು ತಡ ಮಾಡುತ್ತಾರೆ, ಏಕೆಂದರೆ ಸಿನಿಮಾ ಬೇಗ ಒಟಿಟಿಗೆ ಬಂದರೆ ಚಿತ್ರಮಂದಿರಗಳಿಂದ ಬರುವ ಲಾಭ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಅದಕ್ಕೆ ವಿರುದ್ಧವಾಗಿ ನಡೆಯಿರುವುದು ಎಲ್ಲರಿಗೂ ಅಚ್ಚರಿಯಾಗಿದೆ.

ಹೌದು, ರಿಷಭ್ ಶೆಟ್ಟಿ ನಿರ್ದೇಶನದ ಈ ಭರ್ಜರಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಗೊಂಡು ಕೇವಲ ನಾಲ್ಕು ವಾರಗಳಲ್ಲೇ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ನಿರ್ಮಾಪಕರೇ ಉತ್ತರ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ಸಹ ನಿರ್ಮಾಪಕ ಚೆಲುವೇ ಗೌಡ ಅವರು ಹಿಂದಿ ಮಾಧ್ಯಮದ ಸಂದರ್ಶನದಲ್ಲಿ, “ನಾವು ಈ ನಿರ್ಧಾರವನ್ನು ಈಗ ತೆಗೆದುಕೊಂಡದ್ದಲ್ಲ. ಮೂರು ವರ್ಷಗಳ ಹಿಂದೆಯೇ ‘ಕಾಂತಾರ’ ಚಿತ್ರದ ಸಮಯದಲ್ಲಿ ಅಮೆಜಾನ್ ಪ್ರೈಮ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆವು. ಆ ಒಪ್ಪಂದ ಪ್ರಕಾರ ನಾಲ್ಕು ವಾರಗಳ ಒಳಗೆ ಚಿತ್ರವನ್ನು ಒಟಿಟಿಗೆ ತರಬೇಕೆಂದು ನಿಗದಿ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ಈಗ ಬಿಡುಗಡೆ ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಬಾರಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಮಾತ್ರ ಬಿಡುಗಡೆಗೊಂಡಿವೆ. ಹಿಂದಿ ಮತ್ತು ಇಂಗ್ಲೀಷ್ ವರ್ಷನ್‌ಗಳು ಇನ್ನೂ ಎಂಟು ವಾರಗಳ ಬಳಿಕ ಬಿಡುಗಡೆಯಾಗಲಿವೆ ಎಂದು ಅವರು ತಿಳಿಸಿದ್ದಾರೆ. “ನಾವು ಮುಂಚಿತವಾಗಿ ಮಾಡಿದ ಒಪ್ಪಂದಕ್ಕೆ ಗೌರವ ನೀಡಿದ್ದೇವೆ, ಅದಕ್ಕಾಗಿಯೇ ಸಮಯಕ್ಕೆ ಸರಿಯಾಗಿ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ,” ಎಂದು ಚೆಲುವೇ ಗೌಡ ವಿವರಿಸಿದ್ದಾರೆ.

ಅವರು ಮುಂದುವರಿದು, “ಪ್ರತಿ ಸಿನಿಮಾದ ಒಟಿಟಿ ಒಪ್ಪಂದ ವಿಭಿನ್ನವಾಗಿರುತ್ತದೆ. ಕೆಲ ಚಿತ್ರಗಳು ನಾಲ್ಕು ವಾರಕ್ಕೆ, ಕೆಲ ಚಿತ್ರಗಳು ಆರು ವಾರಕ್ಕೆ, ಮತ್ತಿತರವು ಎಂಟು ವಾರಕ್ಕೆ ಬಿಡುಗಡೆಯಾಗುತ್ತವೆ. ಇತ್ತೀಚೆಗೆ ‘ಕೂಲಿ’ ಚಿತ್ರವೂ ನಾಲ್ಕು ವಾರಗಳಲ್ಲಿ ಒಟಿಟಿಗೆ ಬಂದಿತ್ತು,” ಎಂದು ಹೇಳಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರಸ್ತುತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸುಮಾರು 1000 ಕೋಟಿ ಗಳಿಕೆಯ ಹಂತವನ್ನು ತಲುಪುವ ಹಂತದಲ್ಲಿ. ಆದರೂ, ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಅಕ್ಟೋಬರ್ 31ರಂದು ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ ಎನ್ನಲಾಗಿದೆ.

error: Content is protected !!