ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಗರೇಟು ಮತ್ತಿತರ ತಂಬಾಕು ವಸ್ತುಗಳನ್ನು ಶೇ. 40ರ ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ರಾಜ್ಯ ಸರ್ಕಾರಗಳಿಗೆ ಆಗಬಹುದಾದ ಸಂಭವನೀಯ ಆದಾಯ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಮಾರ್ಗೋಪಾಯ ಹುಡುಕಿದೆ.
ವರದಿಗಳ ಪ್ರಕಾರ, ಈ ಸರಕುಗಳಿಗೆ ಜಿಎಸ್ಟಿ ಜೊತೆಗೆ ಹೆಚ್ಚುವರಿ ಸುಂಕಗಳನ್ನು ವಿಧಿಸಿ, ಅದನ್ನು ರಾಜ್ಯಗಳಿಗೆ ಹಂಚಲು ಯೋಜಿಸುತ್ತಿದೆ.
ಈ ಮೊದಲೂ ಕೂಡ ಇದೇ ರೀತಿಯ ವ್ಯವಸ್ಥೆ ಇತ್ತು. ತಂಬಾಕು ಮತ್ತಿತರ ಸಿನ್ ಗೂಡ್ ಅಥವಾ ಪಾಪದ ಸರಕುಗಳಿಗೆ ಶೇ. 28 ಜಿಎಸ್ಟಿ ಹಾಗೂ ಹೆಚ್ಚುವರಿ ಕಾಂಪೆನ್ಸೇಶನ್ ಸೆಸ್ ಅನ್ನು ಹಾಕಲಾಗಿತ್ತು. ಅವೆಲ್ಲಾ ಒಟ್ಟು ಸೇರಿ ಸಿಗರೇಟು ಮತ್ತಿತರ ವಸ್ತುಗಳ ಮೇಲೆ ತೆರಿಗೆ ಶೇ. 50ರಿಂದ 90ರ ಮಟ್ಟದವರೆಗೂ ಇತ್ತು. ಈಗ ಶೇ. 40 ಜಿಎಸ್ಟಿ ಸೇರಿ ಒಟ್ಟೂ ತೆರಿಗೆ ಶೇ. 52-88ರ ಶ್ರೇಣಿಯಲ್ಲಿ ಇರುವ ರೀತಿಯಲ್ಲಿ ಹೆಚ್ಚುವರಿ ಸುಂಕಗಳನ್ನು ಸರ್ಕಾರ ನಿಗದಿ ಮಾಡಲಿದೆ ಎನ್ನಲಾಗಿದೆ.
ಈ ವ್ಯವಸ್ಥೆ ಖಾಯಂ ಆಗಿ ಇರುವುದಿಲ್ಲ. ಸಿಗರೇಟುಗಳನ್ನು ಜಿಎಸ್ಟಿ ವ್ಯಾಪ್ತಿ ತಂದ ಪರಿಣಾಮ ಆದ ನಷ್ಟ ಪ್ರತಿಯಾಗಿ ರಾಜ್ಯಗಳು ತೆಗೆದುಕೊಂಡ ಸಾಲವನ್ನು ಭರ್ತಿಯಾಗುವವರೆಗೂ ಕಾಂಪೆನ್ಸೇಶನ್ ಸೆಸ್ ಇರುತ್ತದೆ. ಹಂತ ಹಂತವಾಗಿ ಈ ಸೆಸ್ ಅನ್ನು ಕಡಿಮೆ ಮಾಡಿ ಕೊನೆಗೆ ತೆಗೆದುಹಾಕಲಾಗುತ್ತದೆ ಎನ್ನಲಾಗಿದೆ.