ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಅಚ್ಚರಿಯ ದಾಖಲೆ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಲೈವ್ ಆ್ಯಕ್ಷನ್ ಚಿತ್ರಗಳೇ ಭಾರೀ ಕಲೆಕ್ಷನ್ ಮಾಡುತ್ತವೆ ಎಂಬ ಕಲ್ಪನೆಯನ್ನು ಮುರಿದಿರುವ ಅನಿಮೇಟೆಡ್ ಸಿನಿಮಾ ‘ಝೂಟೋಪಿಯಾ 2’ ವಿಶ್ವ ಸಿನಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಚಿತ್ರವು ಜಾಗತಿಕವಾಗಿ 1.137 ಬಿಲಿಯನ್ ಡಾಲರ್ ಗಳಿಕೆ ದಾಖಲಿಸಿದ್ದು, ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 10 ಸಾವಿರ ಕೋಟಿ ರೂಪಾಯಿಗೆ ಸಮಾನವಾಗಿದೆ.
2016ರಲ್ಲಿ ಬಿಡುಗಡೆಯಾದ ‘ಝೂಟೋಪಿಯಾ’ ತನ್ನ ವಿಭಿನ್ನ ಕಥಾಹಂದರ, ಹಾಸ್ಯಭರಿತ ನಿರೂಪಣೆ ಮತ್ತು ಸಾಮಾಜಿಕ ಸಂದೇಶಗಳಿಂದ ಪ್ರೇಕ್ಷಕರ ಮನ ಗೆದ್ದಿತ್ತು. ಪ್ರಾಣಿಗಳ ಕಲ್ಪಿತ ನಗರದಲ್ಲಿ ನಡೆಯುವ ಕಥೆಯನ್ನು ಆಧರಿಸಿದ ಈ ಚಿತ್ರದ ಸೀಕ್ವೆಲ್ ಆಗಿ ‘ಝೂಟೋಪಿಯಾ 2’ ಮೂಡಿ ಬಂದಿದೆ. ಮೊದಲ ಭಾಗದ ಜನಪ್ರಿಯತೆಯೇ ಎರಡನೇ ಭಾಗದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು.
ಸುಮಾರು 2 ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಇಂಗ್ಲಿಷ್ ಅನಿಮೇಟೆಡ್ ಸಿನಿಮಾ, ವಿಶ್ವಾದ್ಯಂತ ಅಪಾರ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷವಾಗಿ ಚೀನಾ ಮಾರುಕಟ್ಟೆಯಿಂದಲೇ ಭಾರೀ ಆದಾಯ ಬಂದಿರುವುದು ನಿರ್ಮಾಪಕರಿಗೆ ಮತ್ತಷ್ಟು ಬಲ ನೀಡಿದೆ. ಅನಿಮೇಟೆಡ್ ಚಿತ್ರಗಳು ಥಿಯೇಟರ್‌ನಲ್ಲಿ ಹಿಟ್ ಆಗುವುದಿಲ್ಲ ಎಂಬ ನಂಬಿಕೆಯನ್ನು ಈ ಸಿನಿಮಾ ಸಂಪೂರ್ಣವಾಗಿ ಸುಳ್ಳು ಮಾಡಿದೆ.
ಭಾರತೀಯ ಚಿತ್ರೋದ್ಯಮದಲ್ಲಿಯೂ ಇಂತಹ ಪ್ರಯೋಗಗಳಿಗೆ ಅವಕಾಶ ಇದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ‘ಮಹಾವತಾರ ನರಸಿಂಹ’ ಚಿತ್ರದ ಯಶಸ್ಸು ಕೂಡ ಅನಿಮೇಶನ್ ಸಿನಿಮಾಗಳ ಭವಿಷ್ಯ ಬೆಳಗುವ ಸೂಚನೆ ನೀಡಿದೆ. ‘ಝೂಟೋಪಿಯಾ 2’ ಸಾಧನೆ ಜಾಗತಿಕ ಸಿನಿರಂಗಕ್ಕೆ ಹೊಸ ದಿಕ್ಕು ತೋರಿಸಿದೆ.

