ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ‘ಅಖಂಡ 2’ ಚಿತ್ರದ ಬಿಡುಗಡೆಗೆ ಮುನ್ನವೇ ಅಚಾನಕ್ ಸಂಕಷ್ಟ ತಲೆದೋರಿದ್ದು, ತೆಲುಗು ಸಿನಿರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಡಿಸೆಂಬರ್ 5ರಂದು ಚಿತ್ರ ವಿಶ್ವಾದ್ಯಂತ ತೆರೆಕಾಣಲು ಸಿದ್ದವಾಗಿದ್ದರೂ, ಗುರುವಾರ ರಾತ್ರಿ ಆರಂಭವಾಗಬೇಕಿದ್ದ ಪ್ರೀಮಿಯರ್ ಶೋಗಳನ್ನು ನಿರ್ಮಾಪಕರು ತುರ್ತಾಗಿ ರದ್ದುಗೊಳಿಸಿದ್ದಾರೆ. ಈ ನಿರ್ಧಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 14 ರೀಲ್ಸ್ ಪ್ಲಸ್ ಸಂಸ್ಥೆ ಭಾರೀ ಸಿದ್ಧತೆ ನಡೆಸಿ ಪ್ರೀಮಿಯರ್‌ಗಳಿಗಾಗಿ ವಿಶೇಷ ಪ್ರದರ್ಶನಗಳನ್ನು ಯೋಜಿಸಿತ್ತು. ಸಿನಿಮಾದ ಅಪಾರ ಕ್ರೇಜ್ ಕಾರಣದಿಂದ ರಾತ್ರಿ 9 ಗಂಟೆಯಿಂದಲೇ ಶೋಗಳನ್ನು ಶುರುಮಾಡಲು ನಿರ್ಧರಿಸಲಾಗಿತ್ತು. ಆದರೆ ನಿರ್ಮಾಪಕರ ಪ್ರಕಟಣೆಯ ನಂತರ ಎಲ್ಲಾ ಯೋಜನೆಗಳು ಸ್ಥಗಿತವಾದವು.
ತಾಂತ್ರಿಕ ಕಾರಣ ಎಂದು ಅಧಿಕೃತವಾಗಿ ತಿಳಿಸಿದರೂ, ಒಳಗಿನ ಮಾಹಿತಿ ಪ್ರಕಾರ ಪರಿಸ್ಥಿತಿ ಬೇರೆ. ನಿರ್ಮಾಪಕರಿಗೆ ಈರೋಸ್ ಇಂಟರ್‌ನ್ಯಾಷನಲ್ ಜೊತೆ ಹಣಕಾಸಿನ ಬಾಕಿ ವಹಿವಾಟು ಉಳಿದಿದ್ದು, ಸುಮಾರು 28 ಕೋಟಿ ರೂ. ಪಾವತಿಯಾಗದೇ ಇರುವ ಕುರಿತು ಈರೋಸ್ ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದೆ. ವಿಚಾರಣೆ ಬಳಿಕ ಕೋರ್ಟ್ ಚಿತ್ರ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿ ಪ್ರೀಮಿಯರ್ ಶೋಗಳು ರದ್ದಾಗಿವೆ.
ಇದರ ನಡುವೆಯೇ ವಿದೇಶಗಳಲ್ಲಿ ಎಲ್ಲಾ ಪ್ರದರ್ಶನಗಳು ಎಂದಿನಂತೆ ನಡೆಯಲಿವೆ ಎಂದು ಘೋಷಿಸಲಾಗಿದೆ. ಡಿಸೆಂಬರ್ 5ರಂದು ಭಾರತದಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆಯೇ ಅಥವಾ ಮತ್ತಷ್ಟು ಅಡೆತಡೆ ಎದುರಾಗುತ್ತವೆಯೇ ಎಂಬುದು ಈಗ ಸಿನಿಪ್ರೇಮಿಗಳ ಕುತೂಹಲದ ವಿಷಯವಾಗಿದೆ.

