ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಬೇಕಿದ್ದ ಇಬ್ಬರು ದೊಡ್ಡ ನಟರ ಸಿನಿಮಾಗಳು ಈಗ ಸೆನ್ಸಾರ್ ಮಂಡಳಿಯ ಅಂಗಳದಲ್ಲಿ ಸಿಲುಕಿವೆ. ಜನವರಿ 9ಕ್ಕೆ ತೆರೆಗೆ ಬರಬೇಕಿದ್ದ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಪ್ರಮಾಣ ಪತ್ರ ಸಿಗದ ಕಾರಣ ಬಿಡುಗಡೆ ಮುಂದೂಡಿಕೆಯಾಗಿದೆ. ಇದರ ಬೆನ್ನಲ್ಲೇ, ಜನವರಿ 10ಕ್ಕೆ ನಿಗದಿಯಾಗಿದ್ದ ಶಿವಕಾರ್ತಿಕೇಯನ್ ಹಾಗೂ ಶ್ರೀಲೀಲಾ ಅಭಿನಯದ ‘ಪರಾಶಕ್ತಿ’ ಚಿತ್ರಕ್ಕೂ ಈಗ ಸಿಬಿಎಫ್‌ಸಿ ಬರೋಬ್ಬರಿ 23 ಕಟ್ಸ್‌ಗಳನ್ನು ಸೂಚಿಸಿ ದೊಡ್ಡ ಆಘಾತ ನೀಡಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ, ತಮಿಳುನಾಡಿನಲ್ಲಿ ನಡೆದ ‘ಹಿಂದಿ ವಿರೋಧಿ ಚಳವಳಿ’ಯ ಕತೆಯನ್ನು ಆಧರಿಸಿದೆ. ರಾಜಕೀಯ ಸಂವೇದನಾಶೀಲ ವಿಷಯವಾಗಿರುವುದರಿಂದ ಸೆನ್ಸಾರ್ ಮಂಡಳಿ ಅತಿ ಹೆಚ್ಚು ಕಟ್ಸ್‌ಗಳನ್ನು ನೀಡಿದೆ ಎನ್ನಲಾಗಿದೆ. 125 ಕೋಟಿ ಬಜೆಟ್‌ನಲ್ಲಿ ತಯಾರಾದ, ಶಿವಕಾರ್ತಿಕೇಯನ್ ಅವರ ವೃತ್ತಿಜೀವನದ 25ನೇ ಮೈಲಿಗಲ್ಲಿನ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಈಗ ಮಂಡಳಿಯ ಈ ನಿರ್ಧಾರದಿಂದ ಬೇಸತ್ತಿರುವ ಚಿತ್ರತಂಡ, ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದೆ.
ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ಗೆ ಪ್ರತಿಯಾಗಿ ಡಿಎಂಕೆ ಪಕ್ಷದ ಬೆಂಬಲಿತ ನಿರ್ಮಾಪಕರು ‘ಪರಾಶಕ್ತಿ’ಯನ್ನು ಅಖಾಡಕ್ಕಿಳಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ವಿಜಯ್ ಸಿನಿಮಾದ ಬಿಡುಗಡೆಗೆ ತಡೆಯೊಡ್ಡಲು ರಾಜಕೀಯ ಪ್ರಭಾವ ಬಳಸಲಾಗಿದೆ ಎಂಬ ಆರೋಪಗಳ ನಡುವೆಯೇ, ಈಗ ಸ್ವತಃ ‘ಪರಾಶಕ್ತಿ’ಗೂ ಸೆನ್ಸಾರ್ ಬಿಸಿ ತಟ್ಟಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಒಟ್ಟಿನಲ್ಲಿ, ದಳಪತಿ ವಿಜಯ್ ಮತ್ತು ಶಿವಕಾರ್ತಿಕೇಯನ್ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಸಂಭ್ರಮದ ಮೊದಲೇ ನಿರಾಸೆಯಾದಂತಾಗಿದೆ.

