ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ಲಭಿಸಿದೆ. ಸುದೀಪ್ ನಟನೆಯ ‘ಬಿಲ್ಲ ರಂಗ ಭಾಷಾ: ದಿ ಫಸ್ಟ್ ಬ್ಲಡ್’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಗೊಂಡಿದ್ದು, ಅದು ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಸುದೀಪ್ ಅವರು ವಾರಿಯರ್ ರೂಪದಲ್ಲಿ ಗಮನ ಸೆಳೆದಿದ್ದಾರೆ. ಕೈಯಲ್ಲಿ ರಾಕೆಟ್ ಲಾಂಚರ್ ಹಿಡಿದಿರುವ, ಬೆನ್ನಿಗೆ ಕತ್ತಿ ಕಟ್ಟಿಕೊಂಡಿರುವರು, ಹಣೆಯಲ್ಲಿ ಕನ್ನಡಕ ತೊಟ್ಟಿರುವ ವೇಷ ಧಾಟಿ 40-50ರ ದಶಕದ ಹಿನ್ನೆಲೆಯ ಕಥೆಯಾಗಿರಬಹುದೆಂಬ ಸೂಚನೆ ನೀಡುತ್ತಿದೆ. ಜೊತೆಗೆ ಪೋಸ್ಟರ್‌ನಲ್ಲಿ ಬಾವುಟ, ಹಳೆಯ ಯುದ್ಧ ವಿಮಾನ ಹಾಗೂ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿ ಚಿತ್ರ ಕಾಣಿಸಿಕೊಂಡಿದ್ದು, ಕಥೆ ಸರ್ಕಾರ ಅಥವಾ ದೊಡ್ಡ ವ್ಯವಸ್ಥೆಯ ವಿರುದ್ಧ ಹೋರಾಡುವ ಕ್ರಾಂತಿಕಾರಿಯ ಸುತ್ತ ತಿರುಗಿರಬಹುದು ಎಂಬ ಕುತೂಹಲವನ್ನು ಹುಟ್ಟಿಸಿದೆ.
“ಕ್ರಾಂತಿಕಾರನ ಕೊಲ್ಲಬಹುದು, ಕ್ರಾಂತಿಯನ್ನು ಅಲ್ಲ” ಎಂಬ ಶಕ್ತಿಯುತ ಸಾಲು ಪೋಸ್ಟರ್‌ಗೆ ಮತ್ತಷ್ಟು ಭರವಸೆ ತುಂಬಿದೆ. ಅನೂಪ್ ಭಂಡಾರಿ ಪೋಸ್ಟರ್ ಹಂಚಿಕೊಂಡು, “ತಲೆಬಾಗಿಸಲು ಒಪ್ಪದ ಆ ಒಬ್ಬನ ಕಂಡರೆ ಸಾಮ್ರಾಜ್ಯಗಳಿಗೆ ಭಯ” ಎಂದು ಬರೆದು, ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಸುದೀಪ್ ಮತ್ತು ಅನೂಪ್ ಭಂಡಾರಿ ಜೋಡಿ ಹಿಂದೆಯೇ ‘ವಿಕ್ರಾಂತ್ ರೋಣ’ ಮೂಲಕ ಯಶಸ್ಸು ಕಂಡಿದ್ದು, ಈ ಬಾರಿ ಮತ್ತೊಮ್ಮೆ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾದ ಬಹುತೇಕ ಭಾಗ ಸೆಟ್‌ಗಳಲ್ಲೇ ಚಿತ್ರೀಕರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.