Friday, December 12, 2025

CINE | ಸಿನಿಮಾ ಅಂದ್ರೆ ಬರೀ ನಟನೆಯಲ್ಲ, ನಿರ್ದೇಶನವೂ ಅಲ್ಲ: ಕಿಚ್ಚನ ಆಸಕ್ತಿಯ ಗುಟ್ಟೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ‘ಬಾದ್‌ಷಾ’ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಸುದೀಪ್, ನಿರ್ದೇಶಕನಾಗಿಯೂ ಯಶಸ್ಸು ಕಂಡವರು. ‘ಈಗ’ ಚಿತ್ರದಲ್ಲಿ ಅವರ ಅಭಿನಯದ ಬಗ್ಗೆ ಹೊಸದಾಗಿ ಹೇಳುವ ಅಗತ್ಯವೇ ಇಲ್ಲ. ನಟನಾಗಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು, ಈಗ ನಿರ್ಮಾಪಕರಾಗಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಹಾಗಾದರೆ, ಸಿನಿಮಾದಲ್ಲಿ ಸುದೀಪ್ ಅವರಿಗೆ ಅತ್ಯಂತ ಹೆಚ್ಚು ಇಷ್ಟವಾದ ವಿಷಯ ಯಾವುದು? ಈ ಪ್ರಶ್ನೆಗೆ ಅವರು ಇತ್ತೀಚೆಗೆ ತಮಿಳು ಸಂದರ್ಶನವೊಂದರಲ್ಲಿ ಸ್ವತಃ ಉತ್ತರ ನೀಡಿದ್ದಾರೆ.

ಚಿತ್ರರಂಗಕ್ಕೆ ನಿರ್ದೇಶಕನಾಗುವ ಕನಸಿನೊಂದಿಗೆ ಬಂದ ಸುದೀಪ್, ಅನಿವಾರ್ಯವಾಗಿ ನಾಯಕರಾಗಿ ಬೆಳೆದವರು. ಅವರಿಗೆ ಚಿತ್ರರಂಗದ ಪ್ರತಿಯೊಂದು ವಿಭಾಗವೂ ಪ್ರಿಯವಾದರೂ, ಅವರ ನಿಜವಾದ ಆಸಕ್ತಿ ಇರುವುದು ನಿರ್ದಿಷ್ಟ ವಿಭಾಗದಲ್ಲಿ ಅಲ್ಲ.

ತಮ್ಮ ಆಸಕ್ತಿಯನ್ನು ವಿವರಿಸುತ್ತಾ ಸುದೀಪ್, “ನನಗೆ ನಿರ್ದೇಶನ, ನಟನೆ ಎಂದು ಪ್ರತ್ಯೇಕವಾಗಿ ಏನೂ ಇಲ್ಲ. ನನಗೆ ಸಿನಿಮಾ ಎಂಬುದೇ ಹೆಚ್ಚು ಇಷ್ಟ. ನಾನು ಸಿನಿಮಾ ಮಾಡಲು ಇಷ್ಟಪಡುತ್ತೇನೆ. ಒಂದು ಸಿನಿಮಾ ಒಂದು ಪೇಂಟಿಂಗ್ ಇದ್ದಂತೆ ಅಂದುಕೊಂಡರೆ, ನಾನು ಅದರಲ್ಲಿ ಒಂದು ಬಣ್ಣ ಆಗಲು ಇಷ್ಟಪಡುತ್ತೇನೆ. ನಾನು ಸ್ಟಾರ್ ಎಂಬ ಕಾರಣಕ್ಕೆ ಇಡೀ ಪೇಂಟಿಂಗ್ ನಾನೇ ಎಂದು ಹೇಳುವುದಿಲ್ಲ,” ಎಂದು ಹೇಳುವ ಮೂಲಕ ಚಿತ್ರರಂಗದ ಬಗ್ಗೆ ತಮಗಿರುವ ಅಪಾರ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮಗ್ರ ಪ್ರೀತಿಯೇ ಅವರನ್ನು ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಚಿತ್ರರಂಗದಲ್ಲಿ ಮುನ್ನಡೆಸಲು ಪ್ರೇರೇಪಿಸಿದೆ.

ಸದ್ಯ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಮಾರ್ಕ್’ ಡಿಸೆಂಬರ್ 25ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಗ್ಗೆಯೂ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ತಮಿಳಿನ ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರದ ಮೂಲಕ ಸುದೀಪ್ ಮತ್ತೆ ಮೆಚ್ಚುಗೆ ಪಡೆಯುವ ವಿಶ್ವಾಸದಲ್ಲಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಕಳೆದ ವರ್ಷ ಇದೇ ದಿನಾಂಕದಂದು ಅವರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾಗಿತ್ತು. ‘ಮಾರ್ಕ್’ ಚಿತ್ರದಲ್ಲಿ ಸುದೀಪ್ ಮತ್ತೊಮ್ಮೆ ಖಡಕ್ ಪೊಲೀಸ್ ಅಧಿಕಾರಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

error: Content is protected !!