Wednesday, December 10, 2025

CINE | ಡಿಸೆಂಬರ್ ಬಾಕ್ಸಾಫೀಸ್ ಕದನ: ಕಿಚ್ಚ ಸುದೀಪ್ ‘ಮಾರ್ಕ್’ ಟ್ರೈಲರ್ ಅಬ್ಬರಕ್ಕೆ ಮುಹೂರ್ತ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಲ್ಲಿ ಡಿಸೆಂಬರ್ ತಿಂಗಳು ಭಾರೀ ಸಿನಿಹಬ್ಬಕ್ಕೆ ಸಾಕ್ಷಿಯಾಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಬೆನ್ನಲ್ಲೇ, ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ‘ಮಾರ್ಕ್’ನ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

‘ಮಾರ್ಕ್’ ಚಿತ್ರವು ಕನ್ನಡದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಚಿತ್ರತಂಡವು ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

‘ಮಾರ್ಕ್’ ಸಿನಿಮಾದ ಟ್ರೈಲರ್ ನಾಳೆ, ಅಂದರೆ ಡಿಸೆಂಬರ್ 07 ರಂದು ನಿಖರವಾಗಿ ಬೆಳಿಗ್ಗೆ 11:58 ಕ್ಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಚಿತ್ರತಂಡ, “ನಿರೀಕ್ಷೆಯ ಅವಧಿ ಕಿರಿದಾಗಿದೆ, ಇನ್ನೊಂದು ಸೂರ್ಯೋದಕ್ಕೆ ನಿರೀಕ್ಷೆಗಳು ಅಂತ್ಯವಾಗಲಿವೆ. ‘ಮಾರ್ಕ್’ ಸಿನಿಮಾದ ಟ್ರೈಲರ್, ಆಕ್ಷನ್ ಮತ್ತು ಭಾವನೆಗಳ ಸ್ಪೋಟಕ ಅಲೆಯನ್ನೇ ತರಲಿದೆ” ಎಂದು ಭರವಸೆ ನೀಡಿದೆ.

ಈ ಘೋಷಣೆಯ ಜೊತೆಗೆ, ಸುದೀಪ್ ಅವರು ಕಪ್ಪು ಬಣ್ಣದ ಹುಡಿ ಧರಿಸಿ, ಸಿಗರೇಟು ಹಿಡಿದಿರುವ ಸ್ಟೈಲಿಶ್ ಪೋಸ್ಟರ್ ಅನ್ನು ಸಹ ಹಂಚಿಕೊಳ್ಳಲಾಗಿದೆ.

‘ಮಾರ್ಕ್’ ಸಿನಿಮಾದ ಬಹುತೇಕ ತಾಂತ್ರಿಕ ತಂಡವು ಸುದೀಪ್ ಅವರ ಸೂಪರ್ ಹಿಟ್ ಸಿನಿಮಾ ‘ಮ್ಯಾಕ್ಸ್’ ನಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ. ‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ‘ಮ್ಯಾಕ್ಸ್’ ಚಿತ್ರವನ್ನು ಕಲೈಪುಲಿ ಎಸ್ ತನು ಮತ್ತು ಸುದೀಪ್ ಜಂಟಿಯಾಗಿ ನಿರ್ಮಿಸಿದ್ದರು. ಆದರೆ ‘ಮಾರ್ಕ್’ ಸಿನಿಮಾಕ್ಕೆ ಸತ್ಯಜ್ಯೋತಿ ಫಿಲಮ್ಸ್ ಮತ್ತು ಸುದೀಪ್ ಅವರು ಜೊತೆಯಾಗಿ ಬಂಡವಾಳ ಹೂಡಿದ್ದಾರೆ.

ಛಾಯಾಗ್ರಹಣವನ್ನು ಶೇಖರ್ ಚಂದ್ರ, ಸಂಗೀತ ಸಂಯೋಜನೆಯನ್ನು ಅಜನೀಶ್ ಲೋಕನಾಥ್ ಹಾಗೂ ಸಂಕಲನವನ್ನು ಎಸ್ ಆರ್ ಗಣೇಶ್ ಬಾಬು ನಿರ್ವಹಿಸಿದ್ದಾರೆ.

ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮತ್ತು ರೋಹಿಣಿ ಪ್ರಕಾಶ್ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರವರ್ಗದ ಬಗ್ಗೆ ಡಿಸೆಂಬರ್ 07 ರಂದು ಟ್ರೈಲರ್ ಬಿಡುಗಡೆ ಜೊತೆಗೇ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಸಿನಿಮಾ ಈ ತಿಂಗಳ ಡಿಸೆಂಬರ್ 25 ರಂದು ತೆರೆ ಕಾಣಲು ಸಜ್ಜಾಗಿದೆ.

error: Content is protected !!