ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲಿ ಯಾವುದೇ ಸಿನಿಮಾಗೆ ಹಿನ್ನೆಲೆ ಇಲ್ಲದೆಲೇ ಸ್ಟಾರ್ ಆಗಿ ಬೆಳೆದ ದೀಪಿಕಾ ಪಡುಕೋಣೆ ಇದೀಗ ತಮ್ಮ ಸೀಕ್ವೆಲ್ ಸಿನಿಮಾ ‘ಕಲ್ಕಿ 2898 ಎಡಿ’ಯಿಂದ ಹೊರನಡೆದಿದ್ದಾರೆ. ಆರಂಭದಲ್ಲಿ ದೀಪಿಕಾ ತಮ್ಮ ಕಮಿಟ್ಮೆಂಟ್, ಶ್ರಮ ಮತ್ತು ಪಾತ್ರದಲ್ಲಿ ತೊಡಗುವ ಶೈಲಿಯಿಂದ ನಿರ್ದೇಶಕರಿಂದ ಮೆಚ್ಚುಗೆ ಪಡೆದಿದ್ದರೂ, ತಾಯಿ ಆದ ಬಳಿಕ ನಟಿಯ ಕೆಲಸದ ಶರತ್ತುಗಳು ಮತ್ತು ಡಿಮ್ಯಾಂಡ್ ಪಟ್ಟಿ ಹೆಚ್ಚಾಗಿದೆ.
ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ಸಹ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಬೇಕಾಗಿದ್ದರೂ, ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡುವ ಷರತ್ತು ನೀಡಿದ ಕಾರಣ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ದೀಪಿಕಾರನ್ನು ಬಿಟ್ಟು, ತೃಪ್ತಿ ದಿಮ್ರಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದೇ ರೀತಿಯ ಕಾರಣದಿಂದ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ದೀಪಿಕಾರನ್ನು ಸಿನಿಮಾದಿಂದ ಕೈಬಿಟ್ಟಿರುವುದು ಅಧಿಕೃತವಾಗಿ ತಿಳಿಸಿದ್ದಾರೆ.
ನಿರ್ಮಾಣ ಸಂಸ್ಥೆಯ ಟ್ವೀಟ್‌ನಲ್ಲಿ, “ಸೀಕ್ವೆಲ್ ಸಿನಿಮಾ ಹೆಚ್ಚಿನ ಶ್ರಮ ಮತ್ತು ಶ್ರದ್ಧೆಯನ್ನು ಬೇಡುತ್ತದೆ. ದೀಪಿಕಾ ಅವರ ಭವಿಷ್ಯದ ಸಿನಿಮಾಗಳಿಗೆ ಒಳಿತು ಬಯಸುತ್ತೇವೆ” ಎಂದು ಸ್ಪಷ್ಟಪಡಿಸಲಾಗಿದೆ. ಈ ನಿರ್ಧಾರದಿಂದ ದೀಪಿಕಾ ಪಾತ್ರಕ್ಕೆ ಸಾಕಷ್ಟು ಮಹತ್ವವಿದ್ದ ಸೀಕ್ವೆಲ್ ಹೇಗೆ ಮುಂದುವರಿಯಲಿದೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಎದ್ದಿದೆ.