Saturday, January 10, 2026

CINE | ಪಾಕ್ ನೆಲದಲ್ಲಿ ‘ಧುರಂಧರ್’ ಅಬ್ಬರ: ಬ್ಯಾನ್ ಆದರೂ ಸಿನಿಮಾಗೆ ಬೆಚ್ಚಿಬಿದ್ದ ನೆರೆರಾಷ್ಟ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಆದಿತ್ಯ ಧಾರ್ ಅವರ ಆಕ್ಷನ್ ಕಟ್‌ನಲ್ಲಿ ಮೂಡಿಬಂದಿರುವ ‘ಧುರಂಧರ್’ ಸಿನಿಮಾ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ರಣವೀರ್ ಸಿಂಗ್ ಸ್ಪೈ ಪಾತ್ರದಲ್ಲಿ ಅಬ್ಬರಿಸಿದ್ದು, ಪಾಕಿಸ್ತಾನದ ಉಗ್ರ ಸಂಘಟನೆಗಳ ಒಳಗೆ ನುಗ್ಗಿ ಅವರ ಎದೆಯಲ್ಲಿ ನಡುಕ ಹುಟ್ಟಿಸುವ ಸೈನಿಕನ ಕಥೆ ಇದಾಗಿದೆ. ಚಿತ್ರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಕರಾಳ ಮುಖಗಳನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣದಿಂದಾಗಿ ಅಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ನಿಷೇಧವಿದೆ. ಹೀಗಾಗಿ ‘ಧುರಂಧರ್’ ಕೂಡ ಅಧಿಕೃತವಾಗಿ ಅಲ್ಲಿ ಬಿಡುಗಡೆಯಾಗಿಲ್ಲ. ಆದರೂ, ಚಿತ್ರದ ಮೇಲಿನ ಕುತೂಹಲ ತಡೆಯಲಾಗದ ಪಾಕ್ ಮಂದಿ, ಪೈರಸಿ ಹಾದಿ ಹಿಡಿದಿದ್ದಾರೆ. ಕೇವಲ ಎರಡು ವಾರಗಳಲ್ಲಿ ಅಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಬಾರಿ ಈ ಚಿತ್ರ ಅಕ್ರಮವಾಗಿ ಡೌನ್‌ಲೋಡ್ ಆಗಿದೆ ಎಂಬ ಆಘಾತಕಾರಿ ಹಾಗೂ ಅಚ್ಚರಿಯ ವರದಿ ಹೊರಬಿದ್ದಿದೆ.

ಸಿನಿಮಾದಲ್ಲಿ 1999ರ ಖಂದಹಾರ್ ಹೈಜಾಕ್ ಮತ್ತು 26/11 ಮುಂಬೈ ದಾಳಿಯಂತಹ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. “ಪಾಕಿಸ್ತಾನ ಒಂದು ಉಗ್ರರಾಷ್ಟ್ರ” ಎಂಬ ಸಂದೇಶವನ್ನು ನಿರ್ದೇಶಕ ಆದಿತ್ಯ ಧಾರ್ ಕಟುವಾಗಿ ಸಾರಿದ್ದಾರೆ. ಪೈರಸಿಯಿಂದಾಗಿ ನಿರ್ಮಾಪಕರಿಗೆ ಅಂದಾಜು 50 ರಿಂದ 60 ಕೋಟಿ ರೂಪಾಯಿ ನಷ್ಟವಾಗಿದ್ದರೂ, ತಾವು ನೀಡಬೇಕಿದ್ದ ಸಂದೇಶ ಪಾಕ್ ಮಂದಿಗೆ ನೇರವಾಗಿ ತಲುಪಿದೆ ಎಂಬ ತೃಪ್ತಿ ಚಿತ್ರತಂಡಕ್ಕಿದೆ.

ಭಾರತದಲ್ಲಿ ಈ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸದ್ಯಕ್ಕೆ 460 ಕೋಟಿ ರೂಪಾಯಿ ಗಳಿಕೆ ಮಾಡಿರುವ ಈ ಚಿತ್ರ, ಶನಿವಾರದ ವೇಳೆಗೆ 500 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ. ಈ ಮೂಲಕ 2025ರ ಅತ್ಯಂತ ಯಶಸ್ವಿ ಸಿನಿಮಾಗಳ ಪಟ್ಟಿಯಲ್ಲಿ ‘ಧುರಂಧರ್’ ಅಗ್ರಸ್ಥಾನಕ್ಕೇರಲಿದೆ.

error: Content is protected !!