ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಸ್ಟಾರ್ ಹೀರೋ ಮತ್ತು ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಅವರು ಸದಾ ಉತ್ತಮ ಸಿನಿಮಾಗಳನ್ನು ಪ್ರೋತ್ಸಾಹಿಸುವ ಮೂಲಕ ತಮ್ಮ ಒಳ್ಳೆಯತನವನ್ನು ಮೆರೆದಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಧುರಂಧರ್’ ಅನ್ನು ವೀಕ್ಷಿಸಿದ ಅವರು, ಇಡೀ ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 5 ರಂದು ಬಿಡುಗಡೆಯಾದ ‘ಧುರಂಧರ್’ ಸಿನಿಮಾ ಬಿಡುಗಡೆಯಾದ ಕೇವಲ 8 ದಿನಗಳಲ್ಲಿ 239 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬಾಲಿವುಡ್ ಸೇರಿದಂತೆ ಅನೇಕ ಚಿತ್ರರಂಗದ ಸ್ಟಾರ್‌ಗಳಿಂದ ಈ ಚಿತ್ರ ಪ್ರಶಂಸೆ ಪಡೆಯುತ್ತಿದ್ದು, ಈ ಸಾಲಿಗೆ ಇದೀಗ ಅಲ್ಲು ಅರ್ಜುನ್ ಕೂಡ ಸೇರಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ಅಲ್ಲು ಅರ್ಜುನ್, “ನಾನು ‘ಧುರಂಧರ್’ ಚಿತ್ರವನ್ನು ನೋಡಿದೆ. ಉತ್ತಮ ಅಭಿನಯ, ಅತ್ಯುತ್ತಮ ತಾಂತ್ರಿಕತೆ ಮತ್ತು ಅದ್ಭುತ ಸಂಗೀತದಿಂದ ಕೂಡಿದ ಅದ್ಭುತ ಚಿತ್ರವಿದು. ನನ್ನ ಸಹೋದರ ರಣವೀರ್ ಸಿಂಗ್ ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರು ತಮ್ಮ ಪ್ರತಿಭೆಯಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅಕ್ಷಯ್ ಖನ್ನಾ ಅವರ ವರ್ಚಸ್ಸು ಅದ್ಭುತವಾಗಿದೆ. ಉಳಿದಂತೆ ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್‌ಪಾಲ್ ಸೇರಿದಂತೆ ಎಲ್ಲ ಕಲಾವಿದರ ನಟನೆ ಕೂಡ ಉತ್ತಮವಾಗಿದೆ” ಎಂದು ಶ್ಲಾಘಿಸಿದರು.
ಅವರು ಚಿತ್ರತಂಡದ ಬಗ್ಗೆ ಹೇಳುತ್ತಾ, “ಎಲ್ಲಾ ತಂತ್ರಜ್ಞರು, ಪಾತ್ರವರ್ಗ, ಸಿಬ್ಬಂದಿ ಹಾಗೂ ನಿರ್ಮಾಪಕರು ಸೇರಿ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅದ್ಭುತ ನಿರ್ದೇಶಕ ಆದಿತ್ಯ ಧಾರ್ ಅವರು ಶ್ರೇಷ್ಠ ಚಲನಚಿತ್ರ ನಿರ್ದೇಶಕರು. ಅವರು ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನನಗೆ ಈ ಸಿನಿಮಾ ತುಂಬಾ ಇಷ್ಟವಾಯಿತು. ಎಲ್ಲರೂ ಸಿನಿಮಾವನ್ನು ನೋಡಿ ಆನಂದಿಸಿ” ಎಂದು ತಿಳಿಸಿದರು.
ಅಲ್ಲು ಅರ್ಜುನ್ ಅವರ ಈ ಪ್ರಶಂಸೆಯು ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಮತ್ತಷ್ಟು ಸಂತಸ ತಂದಿದೆ.

