ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ವರ್ಷಗಳಲ್ಲಿ ಭಾರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಪಾಲಿಗೆ ಡಿಸೆಂಬರ್ ತಿಂಗಳು ಸಂಭ್ರಮ ತಂದಿದೆ. ಹಲವು ಚರ್ಚೆಗಳು, ರಿಲೀಸ್‌ಗೂ ಮುನ್ನದ ವಿವಾದಗಳು ಹಾಗೂ ನೆಗೆಟಿವ್ ಮಾತುಗಳ ನಡುವೆಯೂ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿ ಮೂಡಿಸಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ಚಿತ್ರ 100 ಕೋಟಿ ಗಳಿಕೆಯ ಗಡಿ ತಲುಪುವ ಹಂತಕ್ಕೆ ಬಂದಿದೆ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಒಂದು ಸ್ಪೈ ಥ್ರಿಲ್ಲರ್ ಆಗಿದ್ದು, ಕಥೆ ಮತ್ತು ರಣವೀರ್ ಸಿಂಗ್ ಅವರ ಇಂಟೆನ್ಸ್ ಅಭಿನಯವೇ ಪ್ರೇಕ್ಷಕರನ್ನು ಸೆಳೆದಿದೆ. ಚಿತ್ರದ ಮೇಲೆ ಮೊದಲಿನಿಂದಲೂ ಮಿಶ್ರ ಅಭಿಪ್ರಾಯಗಳು ಕೇಳಿಬಂದಿದ್ದರೂ, ತೆರೆಕಂಡ ನಂತರ ಮಾತು ಸಂಪೂರ್ಣ ಬದಲಾಗಿದೆ. ಪ್ರೀ-ಬುಕಿಂಗ್ ಸರಾಸರಿ ಇದ್ದ ಕಾರಣ ಚಿತ್ರ ಮೊದಲ ದಿನ ಸುಮಾರು 18–20 ಕೋಟಿ ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮೀರಿಸಿ ಮೊದಲ ದಿನವೇ ಸಿನಿಮಾ 27 ಕೋಟಿ ಕಲೆಕ್ಷನ್ ಮಾಡಿದೆ.
ಶನಿವಾರ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಮತ್ತಷ್ಟು ಉತ್ತಮವಾಗಿದ್ದು, 32 ಕೋಟಿ ಗಳಿಕೆ ದಾಖಲಾಗಿದೆ. ಭಾನುವಾರ ಚಿತ್ರ ಸುಮಾರು 40 ಕೋಟಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಒಟ್ಟು ಗಳಿಕೆ ಮೂರು ದಿನಗಳಲ್ಲಿ 99–100 ಕೋಟಿ ಸಮೀಪಿಸಿದೆ.
ಧುರಂಧರ್ ಬೆನ್ನಲ್ಲೇ ‘ಧುರಂಧರ್ 2’ ಕುರಿತು ಕೂಡ ಚರ್ಚೆ ಶುರುವಾಗಿದೆ. ಮಾರ್ಚ್ 19ರಂದು ಈದ್ ಹಬ್ಬಕ್ಕೆ ಸೀಕ್ವಲ್ ರಿಲೀಸ್ ಆಗುವ ಸಾಧ್ಯತೆ ಇದ್ದು, ಅದೇ ದಿನ ಯಶ್ ನಟನೆಯ ‘ಟಾಕ್ಸಿಕ್’ ಕೂಡ ತೆರೆಗೆ ಬರಲಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕ್ಲ್ಯಾಶ್ ಕಾಣಿಸಿಕೊಳ್ಳುವ ಲಕ್ಷಣಗಳಿವೆ.

