ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದ್ದು, ರಿಲೀಸ್ ಆದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಲವಾದ ಕಥಾವಸ್ತು, ವೇಗದ ನಿರೂಪಣೆ ಹಾಗೂ ಸ್ಟಾರ್ ಕಾಸ್ಟ್‌ನಿಂದಾಗಿ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರಗಳ ಯಶಸ್ಸಿನ ಬೆನ್ನಲ್ಲೇ, ಈ ಸಿನಿಮಾ ಡಿಜಿಟಲ್ ವೇದಿಕೆಗೆ ಯಾವಾಗ ಬರಲಿದೆ ಎಂಬ ಪ್ರಶ್ನೆ ಜೋರಾಗಿದೆ.
ರಣವೀರ್ ಸಿಂಗ್ ವಿಭಿನ್ನ ಲುಕ್ ಹಾಗೂ ತೀವ್ರ ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಸಂಜಯ್ ದತ್, ಆರ್. ಮಾಧವನ್, ಅಕ್ಷಯ್ ಖನ್ನಾ ಸೇರಿದಂತೆ ದೊಡ್ಡ ತಾರಾಗಣ ಸಿನಿಮಾಗೆ ಇನ್ನಷ್ಟು ತೂಕ ನೀಡಿದೆ. ನೈಜ ಘಟನೆಗಳು, ಜಿಯೋಪಾಲಿಟಿಕಲ್ ಸಂಘರ್ಷಗಳು ಮತ್ತು ರಾ ಸಂಸ್ಥೆಯ ರಹಸ್ಯ ಕಾರ್ಯಾಚರಣೆಗಳಿಂದ ಪ್ರೇರಿತ ಕಥೆ ಪ್ರೇಕ್ಷಕರನ್ನು ಕೊನೆಯವರೆಗೂ ಸೆರೆಹಿಡಿಯುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ದಾಖಲಿಸುತ್ತಿರುವ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಧಿಕೃತ ಘೋಷಣೆ ಇನ್ನೂ ಆಗದಿದ್ದರೂ, 2026ರ ಜನವರಿ 30ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಲ್ಫ್ ದೇಶಗಳಲ್ಲಿ ನಿಷೇಧದ ಸುದ್ದಿಯ ನಡುವೆಯೂ, ‘ಧುರಂಧರ್’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.

