ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣವೀರ್ ಸಿಂಗ್ ಅವರು 2025ರ ಅಂತ್ಯದಲ್ಲಿ ‘ಧುರಂಧರ್’ ಸಿನಿಮಾದ ಭರ್ಜರಿ ಯಶಸ್ಸಿನೊಂದಿಗೆ ಮೆರೆದಿದ್ದಾರೆ. ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಈ ಚಿತ್ರವು ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸಿದೆ.
ಸಿನಿಮಾವು ನೈಜ ಘಟನೆಗಳನ್ನು ಆಧರಿಸಿದ ದೇಶಭಕ್ತಿಯ ಕಥಾಹಂದರವನ್ನು ಹೊಂದಿದ್ದು, ಇದು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಇದರೊಂದಿಗೆ ಆಕ್ಷನ್ ಅಂಶಗಳು ಸಹ ಮನರಂಜನೆ ನೀಡುತ್ತಿರುವುದರಿಂದ, ಚಿತ್ರಮಂದಿರಗಳಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಕಂಡುಬಂದಿದೆ. ವಾರದ ದಿನಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ವಾರಾಂತ್ಯದ ಬೇಡಿಕೆ ತಾರಕಕ್ಕೇರಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಸಕಾರಾತ್ಮಕ ಬಾಯಿ ಮಾತಿನ ಪ್ರಚಾರವೇ ಹೆಚ್ಚಿದ ಕಲೆಕ್ಷನ್‌ಗೆ ಪ್ರಮುಖ ಕಾರಣವಾಗಿದೆ.
ಪ್ರೇಕ್ಷಕರ ಹೆಚ್ಚಿದ ಬೇಡಿಕೆಯನ್ನು ಪೂರೈಸಲು, ಕೆಲವು ಪ್ರಮುಖ ನಗರಗಳಲ್ಲಿ ‘ಧುರಂಧರ್’ ಸಿನಿಮಾದ ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ದೆಹಲಿ ಮತ್ತು ಪುಣೆಯ ಕೆಲವು ಚಿತ್ರಮಂದಿರಗಳಲ್ಲಿ ಸತತ 24 ಗಂಟೆಗಳ ಕಾಲ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಕ್ರೇಜ್‌ಗೆ ಸ್ಪಂದಿಸಲಾಗಿದೆ.
ಬೆಳಗ್ಗೆ 7 ಅಥವಾ 8 ಗಂಟೆಗೆ ಆರಂಭವಾದ ಮೊದಲ ಪ್ರದರ್ಶನದ ಬಳಿಕ, ಮರುದಿನ ಮುಂಜಾನೆ 4.10ರವರೆಗೂ ಹೊಸ ಪ್ರದರ್ಶನಗಳು ಆರಂಭಗೊಂಡಿವೆ. ಆ ಪ್ರದರ್ಶನಗಳು ಮುಗಿಯುವ ವೇಳೆಗೆ ಮತ್ತೆ ಬೆಳಗಿನ ಜಾವ 8 ಗಂಟೆಯಾಗಿದೆ. ಈ ರೀತಿ ನಿರಂತರವಾಗಿ ‘ಧುರಂಧರ್’ ಪ್ರದರ್ಶನಗೊಳ್ಳುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದೆ.
ಆದಿತ್ಯ ಧಾರ್ ನಿರ್ದೇಶನದ ಈ ಮೆಗಾ ಹಿಟ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಅಕ್ಷಯ್ ಖನ್ನಾ, ಸಾರಾ ಅರ್ಜುನ್, ಸಂಜಯ್ ದತ್ ಮತ್ತು ಅರ್ಜುನ್ ರಾಮ್ಪಾಲ್ ಅವರಂತಹ ತಾರಾಬಳಗವಿದೆ. ಬಿಡುಗಡೆಯಾದ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಆಗಿರುವ ‘ಧುರಂಧರ್’, ರಣವೀರ್ ಸಿಂಗ್ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ.

