ಹೊಸದಿಗಂತ ಡಿಜಿಟಲ್ ಡೆಸ್ಕ್:
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಇನ್ನೂ ಬಿಡುಗಡೆ ಆಗಬೇಕಿದ್ದರೂ, ಈಗಾಗಲೇ ಚಿತ್ರದ ಪ್ರಚಾರ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಚಿತ್ರದ ಪ್ರಮುಖ ಪಾತ್ರಗಳ ಪರಿಚಯವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದ್ದು, ಇದೀಗ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ಹುಮಾ ಖುರೇಷಿ ಎಲಿಜಬೆತ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಮಂತ ಹಾಗೂ ಪ್ರಭಾವಶಾಲಿ ಮಹಿಳೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ರೆಟ್ರೋ ಶೈಲಿಯ ಐಷಾರಾಮಿ ಕಾರಿನ ಎದುರು ಗ್ಲಾಮರಸ್ ಉಡುಪಿನಲ್ಲಿ ನಿಂತಿರುವ ಅವರ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಪೋಸ್ಟರ್ ಬಿಡುಗಡೆಯ ಬಳಿಕ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ:
ಬಾಲಿವುಡ್ ಮತ್ತು ವೆಬ್ ಸಿರೀಸ್ ಮೂಲಕ ಜನಪ್ರಿಯತೆ ಗಳಿಸಿರುವ 39 ವರ್ಷದ ಹುಮಾ ಖುರೇಷಿಗೆ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ದೊರೆತಿದೆ. ‘ಟಾಕ್ಸಿಕ್’ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದೆ ಎಂದು ನಿರ್ಮಾಣ ತಂಡ ತಿಳಿಸಿದೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಟೊವಿನೋ ಥಾಮಸ್, ಅಕ್ಷಯ್ ಒಬೆರಾಯ್ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

