Monday, September 8, 2025

CINE | ಥಿಯೇಟರ್ ನಲ್ಲಿ ಓಡ್ತಿಲ್ಲ ‘ಘಾಟಿ’ಯ ಗತ್ತು: ಕಾರಣ ಇವ್ರೆ ಅಂತಿದ್ದಾರೆ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಅದರ ಪ್ರಚಾರ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅನುಷ್ಕಾ ಶೆಟ್ಟಿ ಅಭಿನಯದ ಮಹಿಳಾ ಪ್ರಧಾನ ‘ಘಾಟಿ’ ಚಿತ್ರಕ್ಕೆ ಪ್ರಚಾರದ ಕೊರತೆಯಿಂದ ತೀವ್ರ ಹಿನ್ನಡೆಯಾಗಿರುವುದು ಕಾಣಿಸುತ್ತಿದೆ. ಸೆಪ್ಟೆಂಬರ್ 5ರಂದು ಬಿಡುಗಡೆಯಾದ ಈ ಚಿತ್ರವು ಪ್ರಾರಂಭಿಕ ದಿನದಲ್ಲೇ ಉತ್ತಮ ಕಲೆಕ್ಷನ್ ಕಂಡಿದ್ದರೂ, ನಂತರದ ದಿನಗಳಲ್ಲಿ ಆ ಗತಿ ಮುಂದುವರೆಯಲಿಲ್ಲ.

ಮಾಹಿತಿಯ ಪ್ರಕಾರ, ‘ಘಾಟಿ’ ಸಿನಿಮಾ ಮೊದಲ ದಿನ 2 ಕೋಟಿ ರೂಪಾಯಿ ಗಳಿಕೆ ಮಾಡಿತು. ಆದರೆ ಶನಿವಾರ 1.74 ಕೋಟಿ ರೂಪಾಯಿ ಮತ್ತು ಭಾನುವಾರ 1.15 ಕೋಟಿ ರೂಪಾಯಿ ಮಾತ್ರ ಗಳಿಸಿತು. ಇದರಿಂದಾಗಿ ಒಟ್ಟಾರೆ ಕಲೆಕ್ಷನ್ 4.89 ಕೋಟಿಯಷ್ಟಾಗಿದೆ. ಆರಂಭದ ಹೈಪ್ ಇದ್ದರೂ, ಚಿತ್ರ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆ ಕಾಣದೆ, ಬಾಕ್ಸ್ ಆಫೀಸ್‌ನಲ್ಲಿ ಇಳಿಕೆ ಕಂಡಿದೆ.

ಚಿತ್ರಕ್ಕೆ ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ 4.4 ಸಾವಿರ ಜನರು ಮತ ನೀಡಿ 8.3 ರೇಟಿಂಗ್ ನೀಡಿದ್ದಾರೆ. ಇದು ಒಳ್ಳೆಯ ಅಂಕೆ ಎಂದರೂ, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಮಾತ್ರ ಸಾಕಾಗಿಲ್ಲ.

ಅನುಷ್ಕಾ ಶೆಟ್ಟಿಯೇ ಈ ಹಿನ್ನಡೆಯ ಪ್ರಮುಖ ಕಾರಣ ಎಂದು ಚಿತ್ರರಂಗದ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ‘ಬಾಹುಬಲಿ’, ‘ಭಾಗಮತಿ’ ಸಿನಿಮಾಗಳ ಸಂದರ್ಭದಲ್ಲಿ ಅವರು ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ‘ಘಾಟಿ’ ಚಿತ್ರದ ಸಂದರ್ಭದಲ್ಲಿ ಪ್ರಚಾರದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಕೇವಲ ಆಡಿಯೋ ಮತ್ತು ವಿಡಿಯೋ ಬಿಡುಗಡೆ ಮೂಲಕ ಚಿತ್ರ ನೋಡುವಂತೆ ಕೋರಿಕೊಂಡಿದ್ದಾರೆ. ಇದರಿಂದಾಗಿ ಚಿತ್ರದ ಹೈಪ್ ಕಡಿಮೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ