ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಕೊನೆಯ ತಿಂಗಳು ಬಂದರೆ ಸಾಕು ಚಿತ್ರರಸಿಕರ ನಿರೀಕ್ಷೆ ಹೆಚ್ಚಾಗುತ್ತೆ. ಡಿಸೆಂಬರ್ ತಿಂಗಳು ಚಿತ್ರರಂಗಕ್ಕೆ ಹಬ್ಬದ ವಾತಾವರಣ ತರುವುದು ಸಾಮಾನ್ಯ. ಈ ಬಾರಿ ಕನ್ನಡ ಚಿತ್ರರಂಗವೂ ಅದಕ್ಕೆ ಹೊರತಲ್ಲ. ಸಾಲುಸಾಲು ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ಸಜ್ಜಾಗಿದ್ದು, ಈಗಾಗಲೇ ಟ್ರೇಲರ್‌ಗಳ ಮೂಲಕ ಭರ್ಜರಿ ಕುತೂಹಲ ಹುಟ್ಟಿಸಿವೆ.
ದರ್ಶನ್ ಅಭಿನಯದ ‘ಡೆವಿಲ್’ ಡಿಸೆಂಬರ್ 11ರಂದು ಬಿಡುಗಡೆಯಾಗಲಿದ್ದು, ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಸಿನಿರಸಿಕರ ಮುಂದೆ ಬರಲಿದೆ. ಜೊತೆಗೆ ರಾಜ್ ಬಿ ಶೆಟ್ಟಿ, ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ ಅಭಿನಯದ ‘45’ ಚಿತ್ರವೂ ಡಿಸೆಂಬರ್ ರೇಸ್‌ನಲ್ಲಿ ಇದೆ. ಈ ಪೈಕಿ ‘ಡೆವಿಲ್’ ಹಾಗೂ ‘ಮಾರ್ಕ್’ ಟ್ರೇಲರ್‌ಗಳು ಬಿಡುಗಡೆಯಾದ ಕೆಲವೇ ಸಮಯದಲ್ಲಿ ದಾಖಲೆಯ ವೀಕ್ಷಣೆ ಪಡೆದು ಗಮನ ಸೆಳೆದಿವೆ.
ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಟ್ರೇಲರ್ ಡಿಸೆಂಬರ್ 5ರಂದು ಬಿಡುಗಡೆಯಾಗಿ ಆ್ಯಕ್ಷನ್ ದೃಶ್ಯಗಳು ಹಾಗೂ ಮಾಸ್ ಡೈಲಾಗ್‌ಗಳಿಂದ ಅಭಿಮಾನಿಗಳನ್ನು ಸೆಳೆದಿದೆ. ಈ ಟ್ರೇಲರ್ ಈಗಾಗಲೇ 1.1 ಕೋಟಿ ವೀಕ್ಷಣೆ ಕಂಡಿದೆ. ಆದರೆ ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮಾರ್ಕ್’ ಟ್ರೇಲರ್ ಕೇವಲ 10 ಗಂಟೆಗಳಲ್ಲಿ ಈ ದಾಖಲೆಯನ್ನು ಮುರಿದಿದ್ದು, 1.4 ಕೋಟಿ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.
‘ಡೆವಿಲ್’ ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿರುವುದಾಗಿ ಹೇಳಲಾಗುತ್ತಿದ್ದು, ‘ಮಾರ್ಕ್’ನಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸ್ಟಾರ್ ಕಲಾವಿದರ ಆ್ಯಕ್ಷನ್ ಅವತಾರವೇ ಈ ಟ್ರೇಲರ್ ಹಿಟ್‌ಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ವರ್ಷಾಂತ್ಯದಲ್ಲಿ ಕನ್ನಡ ಬೆಳ್ಳಿತೆರೆ ಮೇಲೆ ದೊಡ್ಡ ಹೊಡೆತ ಸಿಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

