Sunday, October 12, 2025

CINE | ಐದು ದಿನದಲ್ಲೇ 250 ಕೋಟಿ ದಾಟಿದ ‘ಕಾಂತಾರ 1’: ಇನ್ನೂ ಮುಂದುವರಿತಿದೆ ಭರ್ಜರಿ ಓಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಕೇವಲ ಐದು ದಿನಗಳಷ್ಟೇ ಆಗಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಕಳೆದ ಗುರುವಾರ ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ 80 ಕೋಟಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಬರೆದಿತ್ತು. ಸಾಮಾನ್ಯವಾಗಿ ಸೋಮವಾರದಂದು ಹೊಸ ಸಿನಿಮಾಗಳ ಬಾಕ್ಸ್ ಆಫೀಸ್ ಓಟ ಕುಗ್ಗುವುದು ರೂಢಿಯಾದರೂ, ಈ ಸಿನಿಮಾಗೆ ಆ ನಿಯಮ ಅನ್ವಯಿಸಲೇ ಇಲ್ಲ.

ಶನಿವಾರ, ಭಾನುವಾರ ಹೋಲಿಸಿದರೆ ಸೋಮವಾರದ ಕಲೆಕ್ಷನ್ ಸ್ವಲ್ಪ ಕುಸಿತ ಕಂಡರೂ, ಇನ್ನೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಸೋಮವಾರದಂದು ಮಾತ್ರವೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ 30.50 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಲೆಕ್ಷನ್‌ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ತನ್ನ ಬಲವನ್ನು ತೋರಿಸಿದೆ. ಇದರೊಂದಿಗೆ ಐದು ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ 250 ಕೋಟಿಯನ್ನು ದಾಟಿದೆ.

ಭಾರತದಾದ್ಯಂತ ಸಿನಿಮಾಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಅತಿ ಹೆಚ್ಚು ಕಲೆಕ್ಷನ್ ಕರ್ನಾಟಕದಲ್ಲಿಯೇ ನಡೆದಿದೆ. ಸೋಮವಾರವೂ ಕರ್ನಾಟಕದಲ್ಲಿ ಸುಮಾರು 75% ಆಕ್ಯುಪೆನ್ಸಿ ದಾಖಲಾಗಿದ್ದು, ತಮಿಳಿನಲ್ಲಿ 43%, ಮಲಯಾಳಂನಲ್ಲಿ 40%, ತೆಲುಗಿನಲ್ಲಿ 36% ಮತ್ತು ಹಿಂದಿ ಭಾಷಾ ವಲಯದಲ್ಲಿ 18% ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.

ಭಾರತದಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಕೇವಲ ಐದು ದಿನಗಳಲ್ಲಿ ವಿದೇಶಗಳ ಬಾಕ್ಸ್ ಆಫೀಸ್‌ನಿಂದಲೇ 100 ಕೋಟಿಗೂ ಅಧಿಕ ಹಣ ಸಿನಿಮಾದ ಖಾತೆಗೆ ಸೇರಿದೆ. ಇದರಿಂದಾಗಿ ಸಿನಿಮಾ ಜಾಗತಿಕ ಮಟ್ಟದಲ್ಲೂ ತನ್ನ ಛಾಪು ಮೂಡಿಸಿದೆ.

‘ಕಾಂತಾರ: ಚಾಪ್ಟರ್ 1’ 2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿದೆ. ರಿಷಬ್ ಶೆಟ್ಟಿ ಮುಖ್ಯ ಪಾತ್ರ ನಿರ್ವಹಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಗುಲ್ಷನ್ ದೇವಯ್ಯ, ಜಯರಾಮ್ ಹಾಗೂ ಹಲವಾರು ಪ್ರತಿಭಾವಂತ ನಟರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

error: Content is protected !!