Tuesday, September 9, 2025

CINE | ವಿಶ್ವವ್ಯಾಪಿ ರಿಲೀಸ್‌ಗೆ ಸಿದ್ಧವಾದ ಕಾಂತಾರ ಚಾಪ್ಟರ್ 1

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಿನಿರಂಗದ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಅಕ್ಟೋಬರ್ 2 ರಂದು ವಿಶ್ವವ್ಯಾಪಿಯಾಗಿ ತೆರೆಗೆ ಬರಲಿದೆ. ಕೇವಲ ದಕ್ಷಿಣ ಭಾರತದಷ್ಟೇ ಅಲ್ಲದೆ, ಹಿಂದಿ, ಇಂಗ್ಲಿಷ್, ಬೆಂಗಾಲಿ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ದೇಶೀಯ ಮಾರುಕಟ್ಟೆ ಜೊತೆಗೆ ವಿದೇಶೀಯ ಪ್ರೇಕ್ಷಕರಿಗೂ ತಲುಪಲು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ದೊಡ್ಡ ಮಟ್ಟದ ಸಿದ್ಧತೆ ಮಾಡಿದೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ಈ ಚಿತ್ರವನ್ನು ವಿತರಿಸುತ್ತಿದೆ. ಅಲ್ಲದೆ ಯುಕೇಯಲ್ಲಿ ಲಾಫಿಂಗ್ ವಾಟರ್ ಎಂಟರ್‌ಟೈನ್‌ಮೆಂಟ್ ಹಾಗೂ ಡ್ರೀಮ್ಜ್ ಸಂಸ್ಥೆಗಳು ಚಿತ್ರವನ್ನು ರಿಲೀಸ್ ಮಾಡುತ್ತಿವೆ. ಈ ಮೂಲಕ ವಿದೇಶದಲ್ಲಿರುವ ಕನ್ನಡಿಗರು ಹಾಗೂ ಭಾರತೀಯರಿಗೆ ಸಿನಿಮಾ ದೊಡ್ಡ ಪರದೆಯಲ್ಲಿ ಕಾಣುವ ಅವಕಾಶ ಸಿಗಲಿದೆ.

ಕೇರಳದಲ್ಲಿ ನಟ ಪೃಥ್ವಿರಾಜ್ ಮತ್ತು ಸುಪ್ರಿಯಾ ಮೆನನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರವನ್ನು ವಿತರಿಸುತ್ತಿದೆ. ಉತ್ತರ ಭಾರತ ಹಾಗೂ ನೇಪಾಳದಲ್ಲಿ AA Films ಸಂಸ್ಥೆಯು ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ದೇಶದ ಎಲ್ಲಾ ಭಾಗಗಳಲ್ಲಿಯೂ ಕಾಂತಾರ ತನ್ನ ವೈಭವವನ್ನು ತೋರಲು ಸಜ್ಜಾಗಿದೆ.

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯ ಎರಡನ್ನೂ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಜೊತೆಗೆ ಗುಲ್ಸನ್ ದೇವಯ್ಯ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಭವ್ಯವಾದ ಸೆಟ್‌ಗಳಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಾವಿರಾರು ಮಂದಿ ಶ್ರಮಿಸಿದ್ದಾರೆ.

ಇದನ್ನೂ ಓದಿ