Friday, October 17, 2025

CINE | ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ರಿಲೀಸ್: ಪ್ರೇಕ್ಷಕರ ಗಮನ ಸೆಳೆದ ದೃಶ್ಯ ವೈಭವ

ಹೊಸದಿಗಂತ ಡಿಜಿಟಲ್ ಡೆಸ್ಕ್:

2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ‘ಕಾಂತಾರ’ ಸಿನಿಮಾ ಅಪಾರ ಯಶಸ್ಸು ಕಂಡಿತ್ತು. ಆ ಯಶಸ್ಸಿನ ಬಳಿಕ ಪ್ರೇಕ್ಷಕರಲ್ಲಿ ಹುಟ್ಟಿದ ನಿರೀಕ್ಷೆಗೆ ತಕ್ಕಂತೆ ಇದೀಗ ಪ್ರೀಕ್ವೆಲ್ ತೆರೆಗೆ ಬರಲು ಸಿದ್ಧವಾಗಿದೆ. ದಸರಾ ಹಬ್ಬದ ಪ್ರಯುಕ್ತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೋ ಮಾತ್ರ ರಿಲೀಸ್ ಆಗಿದ್ದವು. ಈಗ ಚಿತ್ರದ ಟ್ರೇಲರ್ ಬಿಡುಗಡೆ ಕಂಡಿದೆ.

ರಿಷಬ್ ಶೆಟ್ಟಿ ನಟನೆಯ ಈ ಚಿತ್ರಕ್ಕಾಗಿ ಭವ್ಯ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಟ್ರೇಲರ್‌ನಲ್ಲಿ ಕಾಡಿನ ಸೌಂದರ್ಯ, ಜನಪದದ ವೈಶಿಷ್ಟ್ಯ ಹಾಗೂ ಭವ್ಯತೆಯ ಮಿಶ್ರಣ ತೋರಿಸಲಾಗಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಶೌರ್ಯಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟ್ರೇಲರ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ಅದ್ಭುತ ದೃಶ್ಯಗಳು ಗಮನ ಸೆಳೆದಿವೆ. ವಿಶೇಷವಾಗಿ ರಿಷಬ್ ಶೆಟ್ಟಿ ಅವರ ಸ್ಟಂಟ್‌ಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತಷ್ಟು ಉತ್ಸಾಹ ತುಂಬುವಂತಿದೆ.

‘ಕಾಂತಾರ’ ಚಿತ್ರದಲ್ಲಿ ಕಾಡಿನ ರಹಸ್ಯ, ರಾಜ ಮನೆತನದ ಕಥೆ ಮತ್ತು ಜನಪದದ ನಂಟು ಪ್ರಮುಖವಾಗಿದ್ದರೆ, ಈ ಪ್ರೀಕ್ವೆಲ್‌ನಲ್ಲಿ ಆ ಇತಿಹಾಸದ ಮೂಲಗಳನ್ನು ಅನಾವರಣಗೊಳಿಸಲಾಗಿದೆ. ಅಕ್ಟೋಬರ್ 1ರಂದು ಪ್ರೀಮಿಯರ್ ಶೋ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

error: Content is protected !!