ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಬಹು ನಿರೀಕ್ಷಿತ ಸಿನಿಮಾ ಕಾಂತಾರ ಚಾಪ್ಟರ್ 1 ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಚಿತ್ರ ಬಿಡುಗಡೆಯ ಮುನ್ನವೇ ಪ್ರೀಮಿಯರ್ ಶೋ ಕುರಿತ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ವಿಶೇಷವೆಂದರೆ, ಈ ಪ್ರೀಮಿಯರ್ ಶೋ ಭಾರತದಲ್ಲಲ್ಲ, ದೂರದ ಯುಕೆಯಲ್ಲಿ (UK) ನಡೆಯಲಿದೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ಅಭಿನಯದ ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ದೇಶ–ವಿದೇಶದ ಪ್ರೇಕ್ಷಕರಿಂದ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಚಿತ್ರದ ಫಸ್ಟ್ ಪ್ರೀಮಿಯರ್ ಶೋ ಯುಕೆಯಲ್ಲಿ ಅಕ್ಟೋಬರ್ 1ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಚಿತ್ರ ಬಿಡುಗಡೆಗಿಂತ ಒಂದು ದಿನ ಮುಂಚೆಯೇ ಈ ಪ್ರೀಮಿಯರ್ ನಡೆಯುತ್ತಿರುವುದು ವಿಶೇಷ. ಈ ಮಾಹಿತಿಯನ್ನು ಯುಕೆಯಲ್ಲಿ ವಿತರಣೆ ಮಾಡುತ್ತಿರುವ Laughing Water Entertainment ಮತ್ತು Team Dreamzuk ಅಧಿಕೃತವಾಗಿ ಘೋಷಿಸಿವೆ. ಶೀಘ್ರದಲ್ಲೇ ಈ ಪ್ರೀಮಿಯರ್ ಶೋಗೆ ಬುಕ್ಕಿಂಗ್ ಪ್ರಾರಂಭವಾಗಲಿದೆ.
ಕಾಂತಾರ ಚಾಪ್ಟರ್ 1 ಕೇವಲ ಕನ್ನಡದಲ್ಲೇ ಸೀಮಿತವಾಗದೇ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ದಕ್ಷಿಣ ಭಾರತದಷ್ಟೇ ಅಲ್ಲದೆ, ಉತ್ತರ ಭಾರತದ ಪ್ರೇಕ್ಷಕರಲ್ಲಿಯೂ ಚಿತ್ರದ ನಿರೀಕ್ಷೆ ಹೆಚ್ಚಾಗಿದೆ.
30 ದೇಶಗಳಲ್ಲಿ ರಿಲೀಸ್
ಈ ಸಿನಿಮಾ ಕೇವಲ ಭಾರತದಲ್ಲಲ್ಲದೆ, ಒಟ್ಟು 30 ದೇಶಗಳಲ್ಲಿ ಬಿಡುಗಡೆಯಾಗಲಿದೆ. ಇದು ಕನ್ನಡ ಚಿತ್ರರಂಗದ ಅಂತಾರಾಷ್ಟ್ರೀಯ ಹಾದಿಯಲ್ಲಿ ದೊಡ್ಡ ಹೆಜ್ಜೆಯಾಗಿದ್ದು, ಪ್ರೇಕ್ಷಕರಿಗೆ ಭಾರೀ ಮಟ್ಟದ ಸಿನಿಮಾ ಅನುಭವ ನೀಡಲು ತಂಡ ಸಜ್ಜಾಗಿದೆ. 2 ಗಂಟೆ 45 ನಿಮಿಷದ ಅವಧಿಯ ಈ ಚಿತ್ರದಲ್ಲಿ ಕದಂಬರ ಕಾಲದ ಕಥೆ ಹಾಗೂ ಬನವಾಸಿಯ ಕಾಡಿನ ದೈವ ಜಾಗೃತಿ ಪ್ರಧಾನವಾಗಿರಲಿದೆ.
ಚಿತ್ರಕ್ಕಾಗಿ ಕುಂದಾಪುರದಲ್ಲಿ ವಿಶೇಷವಾಗಿ ದೊಡ್ಡ ಮಟ್ಟದ ಸ್ಟುಡಿಯೋ ಸಿದ್ಧಪಡಿಸಲಾಗಿತ್ತು. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಎಸ್. ಕಶ್ಯಪ್ ಅವರ ಕ್ಯಾಮೆರಾ ವರ್ಕ್ ಹಾಗೂ ರಿಷಬ್ ಶೆಟ್ಟಿ ಅವರ ನಿರ್ದೇಶನ ಈ ಚಿತ್ರವನ್ನು ಇನ್ನಷ್ಟು ವಿಭಿನ್ನವಾಗಿಸಿವೆ. ಸುಮಾರು ಮೂರು ವರ್ಷದ ಶ್ರಮದಿಂದ ಈ ಮಹತ್ವಾಕಾಂಕ್ಷಿ ಚಿತ್ರ ಮೂಡಿ ಬಂದಿದೆ.