Thursday, January 1, 2026

CINE | ಕಿಚ್ಚನ ಕಮಾಲ್, ಶಿವಣ್ಣನ ಮ್ಯಾಜಿಕ್: ಇಲ್ಲಿದೆ ಒಂದು ವಾರದ ಕಲೆಕ್ಷನ್ ರಿಪೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಇಬ್ಬರು ದಿಗ್ಗಜ ನಟರ ಸಿನಿಮಾಗಳು ತೆರೆಕಂಡು ಯಶಸ್ವಿಯಾಗಿ ಒಂದು ವಾರ ಪೂರೈಸಿವೆ. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವ ರಾಜ್‌ಕುಮಾರ್ ಅಭಿನಯದ ‘45’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಬೇಟೆಯಾಡುತ್ತಿದ್ದು, ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಳೆದ ವರ್ಷ ‘ಮ್ಯಾಕ್ಸ್’ ಮೂಲಕ ಧೂಳೆಬ್ಬಿಸಿದ್ದ ಸುದೀಪ್, ಈಗ ‘ಮಾರ್ಕ್’ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದ್ದಾರೆ. ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲೇ 35 ಕೋಟಿ ರೂಪಾಯಿ ಗಳಿಸಿ ಚಿತ್ರತಂಡಕ್ಕೆ ದೊಡ್ಡ ಮೈಲೇಜ್ ನೀಡಿದ್ದ ಈ ಸಿನಿಮಾ, ವಾರದ ಅಂತ್ಯಕ್ಕೆ 40 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆಹಾಕಿದೆ ಎಂದು ಅಂದಾಜಿಸಲಾಗಿದೆ. ದಿನಕ್ಕೆ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಕಾಣುತ್ತಿರುವುದು ಕಿಚ್ಚನ ಕ್ರೇಜ್‌ಗೆ ಸಾಕ್ಷಿಯಾಗಿದೆ. ಚಿತ್ರತಂಡ ಶೀಘ್ರದಲ್ಲೇ ಇದರ ಅಧಿಕೃತ ಅಂಕಿಅಂಶಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

ಮತ್ತೊಂದೆಡೆ, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ‘45’ ಸಿನಿಮಾ ಕೂಡ ತನ್ನದೇ ಆದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ವರದಿಗಳ ಪ್ರಕಾರ, ಈ ಚಿತ್ರ ಇದುವರೆಗೆ 15 ಕೋಟಿ ರೂಪಾಯಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ಥಿಯೇಟರ್ ಗಳಿಕೆ ಒಂದು ಕಡೆಯಾದರೆ, ಮತ್ತೊಂದೆಡೆ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು, ನಿರ್ಮಾಪಕರು ಈಗಲೇ ಸೇಫ್ ಜೋನ್ ತಲುಪಿದ್ದಾರೆ ಎನ್ನಲಾಗಿದೆ.

ಇಂದು ಹೊಸ ವರ್ಷದ ರಜೆ ಇರುವುದರಿಂದ ಎರಡೂ ಸಿನಿಮಾಗಳ ಗಳಿಕೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಸ್ಟಾರ್ ನಟರ ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಖ ಮಾಡುತ್ತಿದ್ದು, ಈ ವಾರಾಂತ್ಯದ ವೇಳೆಗೆ ಎರಡೂ ಚಿತ್ರಗಳು ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿವೆ.

error: Content is protected !!