ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ, ಅಶ್ವಿನ್ ಕುಮಾರ್ ನಿರ್ದೇಶನದ ಪೌರಾಣಿಕ ಕಥೆಯನ್ನು ಆಧರಿಸಿದ ಅನಿಮೇಷನ್ ಸಿನಿಮಾ ‘ಮಹಾವತಾರ ನರಸಿಂಹ’ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು. ಈಗ 56 ದಿನಗಳ ನಿರೀಕ್ಷೆಯ ನಂತರ, ಈ ಚಿತ್ರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ.
ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ರಂಜಿಸಿತು. ಈಗ ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12.30ರಿಂದ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಿದ್ದು, ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದವರಿಗೆ ಮನೆಬಾಗಿಲಿಗೆ ತಲುಪಿದೆ.
ಈ ಸಿನಿಮಾ ಭಕ್ತ ಪ್ರಹ್ಲಾದನ ಕಥೆಯನ್ನು ಆಧರಿಸಿಕೊಂಡಿದ್ದು, ವಿಷ್ಣುವಿನ ನರಸಿಂಹ ಅವತಾರದ ಮೂಲಕ ಹಿರಣ್ಯಕಶಿಪುವಿನ ಸಂಹಾರವನ್ನು ಅದ್ಭುತವಾಗಿ ಅನಾವರಣ ಮಾಡುತ್ತದೆ. ಅತ್ಯಾಧುನಿಕ ಅನಿಮೇಷನ್ ತಂತ್ರಜ್ಞಾನ, ಮನಮೋಹಕ ಛಾಯಾಗ್ರಹಣ ಮತ್ತು ಶ್ರದ್ಧಾಭಕ್ತಿಯಿಂದ ತುಂಬಿದ ಕಥೆ ಪ್ರೇಕ್ಷಕರ ಮನವನ್ನು ಗೆದ್ದಿದೆ.
ವಿಶ್ವದಾದ್ಯಂತ 325.65 ಕೋಟಿ ರೂ. ಸಂಗ್ರಹಿಸಿದ್ದ ಈ ಸಿನಿಮಾ, ಭಾರತದಲ್ಲೇ 250.2 ಕೋಟಿ ರೂ. ಗಳಿಸಿತು. ನಿರ್ದೇಶಕ ಅಶ್ವಿನ್ ಕುಮಾರ್ ತಮ್ಮ ಪ್ರತಿಕ್ರಿಯೆಯಲ್ಲಿ “ಚಿತ್ರವು ಮೊದಲ ವಾರದಲ್ಲೇ 100 ಕೋಟಿ ದಾಟಿದ್ದು ಅಪಾರ ಸಂತೋಷ ತಂದಿದೆ. ಜನರು ಅನಿಮೇಷನ್ ಸಿನಿಮಾಗಳನ್ನು ಕೇವಲ ಮಕ್ಕಳಿಗಾಗಿ ಎಂದು ಭಾವಿಸುತ್ತಿದ್ದರು. ಆದರೆ ‘ಮಹಾವತಾರ ನರಸಿಂಹ’ ಆ ಕಲ್ಪನೆಗೆ ದೊಡ್ಡ ಬದಲಾವಣೆ ತಂದಿದೆ” ಎಂದು ಅಭಿಪ್ರಾಯಪಟ್ಟರು.