Thursday, December 4, 2025

CINE | ಮಹೇಶ್ ಬಾಬುಗೆ ಪ್ಯಾನ್-ವರ್ಲ್ಡ್ ಪಟ್ಟ: ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಮೆಗಾ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಖ್ಯಾತ ನಟ ಮಹೇಶ್ ಬಾಬು ಅವರು ಪ್ರಸ್ತುತ ಪ್ಯಾನ್-ವರ್ಲ್ಡ್ ಮಹತ್ವಾಕಾಂಕ್ಷೆಯ ಸಿನಿಮಾ ‘ವಾರಣಾಸಿ’ ಚಿತ್ರೀಕರಣದಲ್ಲಿ ಬಿಡುವಿಲ್ಲದಿದ್ದಾರೆ. ಈ ಚಿತ್ರವನ್ನು ದೃಶ್ಯ ವೈಭವದ ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರು ನಿರ್ದೇಶಿಸುತ್ತಿದ್ದು, ಇದನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಭಾರಿ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾದ ಟೈಟಲ್ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮಗಳನ್ನೇ ವಿಶ್ವದರ್ಜೆಯಲ್ಲಿ ಆಯೋಜಿಸುವ ಮೂಲಕ ರಾಜಮೌಳಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರದ ಮೂಲಕ ಮಹೇಶ್ ಬಾಬು ಅವರು ಸಂಪೂರ್ಣವಾಗಿ ಪ್ಯಾನ್-ವರ್ಲ್ಡ್ ನಟನಾಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಈ ಸನ್ನಿವೇಶದ ನಡುವೆ, ಶೀಘ್ರವೇ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ‘ಅವತಾರ್ 3’ ಚಲನಚಿತ್ರದಲ್ಲಿ ಮಹೇಶ್ ಬಾಬು ಅವರ ‘ವಾರಣಾಸಿ’ ಟೀಸರ್ ಪ್ರದರ್ಶನವಾಗಲಿದೆ ಎಂಬ ಮಹತ್ವದ ಸುದ್ದಿ ಈಗ ಭಾರೀ ಸದ್ದು ಮಾಡುತ್ತಿದೆ.

ಹಾಲಿವುಡ್‌ನ ದಿಗ್ಗಜ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ನಿರ್ದೇಶಿಸಿರುವ ‘ಅವತಾರ್ 3’ ಸಿನಿಮಾ ಡಿಸೆಂಬರ್ 19 ರಂದು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ‘ಅವತಾರ್’ ಸರಣಿಯ ಈ ಚಿತ್ರವನ್ನು ಮುಗಿಬಿದ್ದು ನೋಡುವ ಪ್ರೇಕ್ಷಕರ ಸಂಖ್ಯೆ ಅಗಾಧವಾಗಿದೆ.

ಸಿನಿಮಾದ ಈ ಜಾಗತಿಕ ಪ್ರೇಕ್ಷಕ ವರ್ಗವನ್ನು ತಮ್ಮ ‘ವಾರಣಾಸಿ’ ಪ್ರಚಾರಕ್ಕೆ ಬಳಸಿಕೊಳ್ಳಲು ರಾಜಮೌಳಿ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ‘ಅವತಾರ್ 3’ ಚಿತ್ರದ ಬಿಡುಗಡೆಯಾಗುತ್ತಿರುವ ಆಯ್ದ ಪ್ರಮುಖ ದೇಶಗಳಲ್ಲಿ, ಅದರ ಇಂಟರ್ವೆಲ್ ಸಮಯದಲ್ಲಿ ಮಹೇಶ್ ಬಾಬು ನಟನೆಯ ‘ವಾರಣಾಸಿ’ ಟೀಸರ್ ಅನ್ನು ಅಟ್ಯಾಚ್ ಮಾಡಿ ಪ್ರದರ್ಶನ ಮಾಡಲಾಗುತ್ತಿದೆ. ವಿಶ್ವ ಮಟ್ಟದಲ್ಲಿ ‘ವಾರಣಾಸಿ’ಯನ್ನು ಪರಿಚಯಿಸುವ ರಾಜಮೌಳಿಯ ಮೊದಲ ಕಾರ್ಯತಂತ್ರ ಇದಾಗಿದೆ.

ಇಬ್ಬರು ದೈತ್ಯ ನಿರ್ದೇಶಕರ ನಡುವಿನ ಸ್ನೇಹ ಈ ಅಸಾಮಾನ್ಯ ಪ್ರಚಾರಕ್ಕೆ ಕಾರಣವಾಗಿದೆ. ಜೇಮ್ಸ್ ಕ್ಯಾಮರೂನ್ ಮತ್ತು ರಾಜಮೌಳಿ ಉತ್ತಮ ಮಿತ್ರರಾಗಿದ್ದಾರೆ. ರಾಜಮೌಳಿ ಅವರ ‘ಆರ್‌ಆರ್ಆರ್’ ಸಿನಿಮಾವನ್ನು ವೀಕ್ಷಿಸಿದ್ದ ಕ್ಯಾಮರೂನ್ ಅವರು, ರಾಜಮೌಳಿಯವರ ನಿರ್ದೇಶನಕ್ಕೆ ಮನಸೋತು ಕೊಂಡಾಡಿದ್ದರು. ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಕುರಿತು ಅವರಿಗೆ ಬೆಂಬಲ ನೀಡುವ ಆಫರ್ ಸಹ ನೀಡಿದ್ದರು. ಈಗ ತಮ್ಮದೇ ಸಿನಿಮಾ ಮೂಲಕ ರಾಜಮೌಳಿಯವರ ಕನಸಿನ ಯೋಜನೆಗೆ ಪ್ರಚಾರ ನೀಡಲು ಒಪ್ಪಿಗೆ ಸೂಚಿಸುವ ಮೂಲಕ ಈ ಇಬ್ಬರು ದಿಗ್ಗಜರು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ.

error: Content is protected !!