ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿನಯದ ಚಿತ್ರವೊಂದು ಪಡೆದ ಭರ್ಜರಿ ಯಶಸ್ಸಿನ ಹಿನ್ನೆಲೆ ಅವರು ಕೈಗೊಂಡ ನಿರ್ಧಾರವೀಗ ಟಾಲಿವುಡ್ ವಲಯದಲ್ಲಿ ಗಮನ ಸೆಳೆದಿದೆ. ಇತ್ತೀಚೆಗೆ ಪವನ್ ಕಲ್ಯಾಣ್, ತಮ್ಮ ನಟನೆಯ ಸೂಪರ್ ಹಿಟ್ ಸಿನಿಮಾ ‘ಓಜಿ’ಯ ನಿರ್ದೇಶಕ ಸುಜೀತ್ ಅವರಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಆಂಧ್ರ ವಿಧಾನಸಭೆ ಚುನಾವಣೆಗೂ ಮುನ್ನ ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ಎರಡು ಚಿತ್ರಗಳು ಈಗಾಗಲೇ ಪ್ರೇಕ್ಷಕರ ಮುಂದೆ ಬಂದಿವೆ. ವಿಶೇಷವಾಗಿ ‘ಓಜಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ಪವನ್ ಕಲ್ಯಾಣ್ ಅವರ ಸ್ಟೈಲಿಷ್ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮಾಫಿಯಾ ಹಿನ್ನೆಲೆಯ ಕಥೆಯಲ್ಲಿ ಅವರ ಅಭಿನಯ ಮತ್ತು ನಿರ್ದೇಶನದ ಹಿಡಿತವೇ ಚಿತ್ರದ ಬಲವಾಗಿತ್ತು.
ಈ ಯಶಸ್ಸಿಗೆ ಕಾರಣವಾದ ನಿರ್ದೇಶಕ ಸುಜೀತ್ ಅವರ ಶ್ರಮಕ್ಕೆ ಗೌರವ ಸೂಚಿಸುವಂತೆ ಪವನ್ ಕಲ್ಯಾಣ್ ಕಪ್ಪು ಬಣ್ಣದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಒಂದು ಕೋಟಿಯಿಂದ ಮೂರು ಕೋಟಿ ರೂಪಾಯಿ ಮೌಲ್ಯದ ಈ ಕಾರು ನೀಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

