ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಚಿತ್ರರಂಗದಲ್ಲಿ ವಿಶೇಷ ಸಂಭ್ರಮ ಮನೆಮಾಡಿದೆ. ಈ ಸಂಭ್ರಮಕ್ಕೆ ಪೂರಕವಾಗಿ ಅಪ್ಪು ನಟನೆಯ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾ ‘ಆಕಾಶ್’ ಈಗ ಬರೋಬ್ಬರಿ 20 ವರ್ಷಗಳ ನಂತರ ಮರು ಬಿಡುಗಡೆಯಾಗುತ್ತಿದೆ.
ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಇದರ ಸಂಭ್ರಮಾಚರಣೆಯ ಅಂಗವಾಗಿ, ಮಾರ್ಚ್ 13 ರಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ‘ಆಕಾಶ್’ ಸಿನಿಮಾ ಮತ್ತೆ ಪ್ರದರ್ಶನಗೊಳ್ಳಲಿದೆ. ಪಿಆರ್ ಕೆ ಪ್ರೊಡಕ್ಷನ್ಸ್ ವತಿಯಿಂದ ಈ ಚಿತ್ರವನ್ನು ಮರು ಬಿಡುಗಡೆ ಮಾಡಲಾಗುತ್ತಿದ್ದು, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಈ ಬಗ್ಗೆ ಅಧಿಕೃತ ಪೋಸ್ಟರ್ ಹಂಚಿಕೊಂಡಿದೆ.

2005 ರಲ್ಲಿ ಬಿಡುಗಡೆಯಾಗಿದ್ದ ‘ಆಕಾಶ್’, ಪುನೀತ್ ರಾಜ್‌ಕುಮಾರ್ ವೃತ್ತಿಜೀವನದ 5ನೇ ಸಿನಿಮಾ. ಮಧ್ಯಮ ವರ್ಗದ ಸರಳ ಯುವಕನ ಪಾತ್ರದಲ್ಲಿ ಅಪ್ಪು ಮ್ಯಾಜಿಕ್ ಮಾಡಿದ್ದರು. ಅಂದು ಈ ಸಿನಿಮಾ 200ಕ್ಕೂ ಹೆಚ್ಚು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತ್ತು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಮಹೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು.
ಈ ಸಿನಿಮಾದ ಮೂಲಕ ಪುನೀತ್ ಹಾಗೂ ರಮ್ಯಾ ಅವರ ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು. ಆರ್.ಪಿ. ಪಟ್ನಾಯಕ್ ಅವರ ಸಂಗೀತ ನಿರ್ದೇಶನದ ಹಾಡುಗಳು ಇಂದಿಗೂ ಮನೆಮಾತು. ವಿಶೇಷವಾಗಿ ಕುನಾಳ್ ಗಾಂಜಾವಾಲ ಹಾಡಿರುವ ‘ನೀನೆ ನೀನೆ ಮನಸೆಲ್ಲ ನೀನೆ’ ಹಾಡು ಕನ್ನಡಿಗರ ಹಾಟ್ ಫೇವರಿಟ್. ಈಗ ಮತ್ತೆ ಈ ಹಾಡನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

