ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಿಡುಗಡೆಯಾದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ರಣವೀರ್ ಸಿಂಗ್ ನಟನೆಯ ಈ ದೇಶಭಕ್ತಿ ಕಥಾಹಂದರದ ಚಿತ್ರವು ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಗಳಿಸಿದ್ದು, ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಡುತ್ತಿದೆ. ಈ ಸೂಪರ್ ಸಕ್ಸಸ್‌ನಿಂದಾಗಿ ನಟ ರಣವೀರ್ ಸಿಂಗ್ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲುಗಲ್ಲು ಸಿಕ್ಕಿದೆ.
ಡಿಸೆಂಬರ್ 5ರಂದು ತೆರೆ ಕಂಡ ‘ಧುರಂಧರ್’, ಕೇವಲ 9 ದಿನಗಳಲ್ಲಿ ಒಟ್ಟು 292 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಅಚ್ಚರಿಯೆಂದರೆ, ಈ ಸಿನಿಮಾ 9ನೇ ದಿನವೂ 50 ಕೋಟಿಗೂ ಅಧಿಕ ಗಳಿಕೆ ಮಾಡಿದೆ. sacnilk ಪ್ರಕಾರ, 9ನೇ ದಿನ ಈ ಚಿತ್ರದ ಗಳಿಕೆ ಬರೋಬ್ಬರಿ 53 ಕೋಟಿಯಾಗಿದೆ.
| ದಿನ | ಕಲೆಕ್ಷನ್ (ಕೋಟಿ ರೂ.) |
| ಮೊದಲ ದಿನ | 28 |
| 2ನೇ ದಿನ | 32 |
| 3ನೇ ದಿನ | 43 |
| 4ನೇ ದಿನ | 23.25 |
| 5, 6, 7ನೇ ದಿನ | ತಲಾ 27 |
| 8ನೇ ದಿನ | 32.5 |
| 9ನೇ ದಿನ | 53 |
| ಒಟ್ಟು ಕಲೆಕ್ಷನ್ | 292 |
ಈ ಚಿತ್ರಕ್ಕೆ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಉರಿ’ ಚಿತ್ರದಂತೆಯೇ ‘ಧುರಂಧರ್’ ಕೂಡ ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ. ಈ ಚಿತ್ರದ ಬಹುತೇಕ ಭಾಗವು ಪಾಕಿಸ್ತಾನದಲ್ಲಿ ನಡೆಯುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.
ರಣವೀರ್ ಸಿಂಗ್ ಅವರಿಗೆ ನಾಯಕಿಯಾಗಿ ಸಾರಾ ಅರ್ಜುನ್ ಅಭಿನಯಿಸಿದ್ದಾರೆ. ಇದರ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮತ್ತು ಆರ್. ಮಾಧವನ್ ಅವರಂತಹ ಪ್ರಮುಖ ಕಲಾವಿದರು ಸಿನಿಮಾದಲ್ಲಿ ಇದ್ದಾರೆ. ವಿಶೇಷವಾಗಿ, ನಟ ಅಕ್ಷಯ್ ಖನ್ನಾ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡಿಸೆಂಬರ್ 5ರಂದು ಬಿಡುಗಡೆಯಾದ ಬಳಿಕ, ನಂತರದ ವಾರ ತೆರೆ ಕಂಡ ‘ದಿ ಡೆವಿಲ್’ ಮತ್ತು ‘ಅಖಂಡ 2’ ಸಿನಿಮಾಗಳ ನಡುವೆಯೂ ‘ಧುರಂಧರ್’ ಗಟ್ಟಿಯಾಗಿ ನಿಂತಿದೆ. ಇತರೆ ಸಿನಿಮಾಗಳಿಗೆ ಕಠಿಣ ಸ್ಪರ್ಧೆ ನೀಡುತ್ತಿರುವ ಈ ಚಿತ್ರ, 10ನೇ ದಿನವಾದ ಭಾನುವಾರ ಸಹ ದೊಡ್ಡ ಮೊತ್ತದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

