Wednesday, December 10, 2025

CINE | ಪ್ರಶಾಂತ್ ನೀಲ್-Jr. NTR ಸಿನಿಮಾ ನಿಂತಿಲ್ಲ: ಶೂಟಿಂಗ್ ಆರಂಭ! ಫ್ಯಾನ್ಸ್ ಕುತೂಹಲಕ್ಕೆ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರದ ಕುರಿತು ಹಬ್ಬಿದ್ದ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ. ಈ ಸಿನಿಮಾ ನಿಂತುಹೋಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತಾದರೂ, ಈಗ ಅಧಿಕೃತವಾಗಿ ಚಿತ್ರೀಕರಣದ ದಿನಾಂಕ ಪ್ರಕಟವಾಗಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ನೀಲ್ ಅವರ ತಯಾರಿಯ ಬಗ್ಗೆ ಜೂನಿಯರ್ ಎನ್‌ಟಿಆರ್ ಅವರಿಗೆ ಖುಷಿ ಇಲ್ಲ ಎಂಬ ವರದಿಗಳೂ ಕೇಳಿ ಬಂದಿದ್ದವು. ಆದರೆ, ಈ ಗೊಂದಲಗಳೆಲ್ಲ ದೂರವಾಗಿವೆ. ಚಿತ್ರತಂಡವು ನಿಗದಿಪಡಿಸಿದಂತೆ ಕೆಲಸಗಳನ್ನು ಮುಂದುವರಿಸುತ್ತಿದೆ.

ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿದಿದ್ದು, ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಚಿತ್ರೀಕರಣ ನಡೆದಿತ್ತು ಎಂದು ತಿಳಿದುಬಂದಿದೆ. ಈಗ ಚಿತ್ರವು ತನ್ನ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಡಿಸೆಂಬರ್ 8 ರಿಂದ ಶೂಟಿಂಗ್ ಪುನರಾರಂಭಗೊಳ್ಳಲಿದ್ದು, ಈ ಹಂತದಲ್ಲಿ ಪ್ರಮುಖ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ಕ್ರಿಸ್‌ಮಸ್ ರಜೆಗಳವರೆಗೂ ಶೂಟಿಂಗ್ ಮುಂದುವರಿಯಲಿದ್ದು, ಹೊಸ ವರ್ಷದ ಸಂದರ್ಭದಲ್ಲಿ ಚಿತ್ರತಂಡ ಬ್ರೇಕ್ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

ಈ ಚಿತ್ರಕ್ಕಾಗಿ ಜೂನಿಯರ್ ಎನ್‌ಟಿಆರ್ ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ತೆಳ್ಳಗಿನ ರೂಪಕ್ಕೆ ಮರಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅವರು ಇಷ್ಟು ಸ್ಲಿಮ್ ಆಗಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ, ಈ ಕುತೂಹಲಕ್ಕೆ ಚಿತ್ರದಲ್ಲಿ ಉತ್ತರ ಸಿಗಲಿದೆಯಂತೆ. ಅವರ ಈ ಹೊಸ ಲುಕ್ ಕಥೆಯ ಒಂದು ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಅಭಿಮಾನಿಗಳು ಎನ್‌ಟಿಆರ್ ಅವರ ಹೊಸ ನೋಟ ಕಂಡು ಆತಂಕ ವ್ಯಕ್ತಪಡಿಸಿದ್ದರೂ, ಚಿತ್ರದ ಕಥಾನಕದಲ್ಲಿ ಅದರ ಮಹತ್ವವನ್ನು ತಿಳಿದು ಖುಷಿ ಪಡಲಿದ್ದಾರೆ.

ಸಿನಿಮಾಗೆ ‘ಡ್ರ್ಯಾಗನ್’ ಎಂಬ ಶೀರ್ಷಿಕೆ ಇಡಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಪ್ರಶಾಂತ್ ನೀಲ್ ಅವರು ಪ್ರತಿ ದೃಶ್ಯವನ್ನೂ ಸ್ಕ್ರಿಪ್ಟ್ ಹಂತದಲ್ಲೇ ಅಚ್ಚುಕಟ್ಟಾಗಿ ರೂಪಿಸುವಲ್ಲಿ ಹೆಸರುವಾಸಿ. ಹೀಗಾಗಿ, ಸೆಟ್‌ಗೆ ತೆರಳಿದ ನಂತರ ಕೇವಲ ಅದನ್ನು ಜಾರಿಗೆ ತರುವ ಕೆಲಸ ಮಾತ್ರ ಬಾಕಿ ಇರುತ್ತದೆ. ಈ ಬಾರಿಯೂ ಅವರ ಈ ಶಿಸ್ತುಬದ್ಧ ಕೆಲಸ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

error: Content is protected !!