Monday, November 10, 2025

CINE | ರಣಬೀರ್–ಆಲಿಯಾ ಅಭಿನಯದ ‘ಲವ್ ಅಂಡ್ ವಾರ್’ ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಲವ್ ಅಂಡ್ ವಾರ್’ ಕುರಿತು ಹೊಸ ಅಪ್‌ಡೇಟ್ ಹೊರಬಂದಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯಿಸುತ್ತಿರುವ ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದಾರೆ. ಚಿತ್ರ ಶೂಟಿಂಗ್ ಇದೀಗ ವೇಗವಾಗಿ ಮುಂದುವರಿಯುತ್ತಿದ್ದು, ಅಭಿಮಾನಿಗಳು ಅದ್ಧೂರಿ ಚಿತ್ರಕಥೆ ಮತ್ತು ಬನ್ಸಾಲಿ ಶೈಲಿಯ ದೃಶ್ಯ ವೈಭವದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಚಿತ್ರದ ನಿರ್ಮಾಣದ ಕುರಿತಂತೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದ್ದರೂ, ಇದೀಗ ‘ಲವ್ ಅಂಡ್ ವಾರ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಖಚಿತವಾಗಿದೆ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ 2026ರ ಆಗಸ್ಟ್ 14ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬನ್ಸಾಲಿ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಗೆ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ರಣಬೀರ್–ಆಲಿಯಾ ಜೋಡಿಯ ಎರಡನೇ ಸಿನಿಮಾ ಆಗಿದ್ದು, ಈ ಹಿಂದೆ ಇಬ್ಬರೂ ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಈಗ ಬನ್ಸಾಲಿಯ ಮ್ಯಾಜಿಕ್‌ನಲ್ಲಿ ಅವರ ಜೋಡಿ ಮತ್ತೊಮ್ಮೆ ಹೇಗೆ ಕಾಣಿಸಿಕೊಳ್ಳುತ್ತದೆ ಎನ್ನುವುದರ ಬಗ್ಗೆ ಬಾಲಿವುಡ್ ವಲಯದಲ್ಲಿ ಚರ್ಚೆ ಜೋರಾಗಿದೆ.

ಈ ಸಿನಿಮಾದಲ್ಲಿ ಬೊಮನ್ ಇರಾನಿ, ತುಷಾರ್ ಕಪೂರ್, ಕೃಷ್ಣ ಅಭಿಷೇಕ್, ಭಾಗ್ಯಶ್ರೀ, ಜಾವೇದ್ ಜಾಫ್ರಿ, ಅಂಕಿತಾ ಲೋಖಂಡೆ, ಅನಿತಾ ರಾಜ್, ಸತ್ಯರಾಜ್, ಶೆಫಾಲಿ ಶಾ, ಸುಪ್ರಿಯಾ ಪಾಠಕ್, ನಾದಿರಾ ಬಬ್ಬರ್ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ಪ್ರತಿಭಾವಂತ ನಟರು ಸಹ ಭಾಗಿಯಾಗಿದ್ದಾರೆ. ಮೊದಲಿಗೆ ಈ ಚಿತ್ರವನ್ನು 2026ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ಈಗ ಅದನ್ನು ಸ್ವಾತಂತ್ರ್ಯ ದಿನಾಚರಣೆ ವೀಕೆಂಡ್‌ಗೆ ಶಿಫ್ಟ್ ಮಾಡಲಾಗಿದೆ.

ಅದೇ ದಿನ ಕಾರ್ತಿಕ್ ಆರ್ಯನ್ ಅಭಿನಯದ ‘ನಾಗ್‌ಜಿಲ್ಲಾ’ ಚಿತ್ರವೂ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸ್ಪರ್ಧೆ ಅನಿವಾರ್ಯವಾಗಿದೆ. ಮೃಗ್ದೀಪ್ ಸಿಂಗ್ ಲಂಬಾ ನಿರ್ದೇಶನದ ಈ ಫ್ಯಾಂಟಸಿ ಕಾಮಿಡಿ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಇದರಲ್ಲಿ ಕಾರ್ತಿಕ್ ಆರ್ಯನ್ ಇಚ್ಛಾಧಾರಿ ನಾಗ ‘ಪ್ರಿಯಂವದೇಶ್ವರ್ ಪ್ಯಾರೇ ಚಂದ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಶ್ರದ್ಧಾ ಕಪೂರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

error: Content is protected !!