Friday, January 2, 2026

CINE | ಹಿಂದಿಗೆ ರೀಮೇಕ್ ಆಗ್ತಿದೆ ರಶ್ಮಿಕಾ-ವಿಜಯ್ ಸಿನಿಮಾ: ಯಾವ ಮೂವಿ? ಪ್ರೊಡ್ಯೂಸರ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾನ್ ಇಂಡಿಯಾ ಸಿನಿಮಾಗಳ ಯುಗ ಆರಂಭವಾದ ಬಳಿಕ ಚಿತ್ರರಂಗದಲ್ಲಿ ರೀಮೇಕ್ ಸಂಸ್ಕೃತಿ ನಿಧಾನವಾಗಿ ಹಿಂಜರಿದಿದ್ದರೂ, ಇತ್ತೀಚೆಗೆ ಕೆಲ ಹಳೆಯ ದಕ್ಷಿಣದ ಸಿನಿಮಾಗಳು ಮತ್ತೆ ಹಿಂದಿಯಲ್ಲಿ ಮರುಜನ್ಮ ಪಡೆಯುತ್ತಿವೆ. ಈ ಸಾಲಿನಲ್ಲಿ ಈಗ ತೆಲುಗಿನ ‘ಡಿಯರ್ ಕಾಮ್ರೆಡ್’ ಸಿನಿಮಾ ಸೇರ್ಪಡೆಯಾಗಿದೆ. 2019ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ಮರುನಿರ್ಮಿಸಲು ನಿರ್ಮಾಪಕ ಕರಣ್ ಜೋಹರ್ ಮುಂದಾಗಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸಿದ್ದ ‘ಡಿಯರ್ ಕಾಮ್ರೆಡ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿರಲಿಲ್ಲ. ಸುಮಾರು 33 ಕೋಟಿ ರೂಪಾಯಿ ಗಳಿಕೆ ಮಾಡಿದ ಈ ಸಿನಿಮಾ ತನ್ನ ವಿಷಯ, ಭಾವನಾತ್ಮಕ ದೃಶ್ಯಗಳು ಮತ್ತು ಸಾಮಾಜಿಕ ಸಂದೇಶದ ಕಾರಣ ಇಂದಿಗೂ ಚರ್ಚೆಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕೆಲ ದೃಶ್ಯಗಳು ಇನ್ನೂ ವೈರಲ್ ಆಗುತ್ತಲೇ ಇವೆ.

ಇದೀಗ ಈ ಕಥೆಯನ್ನು ಹಿಂದಿಗೆ ತರುವ ಜವಾಬ್ದಾರಿಯನ್ನು ಕರಣ್ ಜೋಹರ್ ವಹಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಪಾತ್ರದಲ್ಲಿ ಯುವ ನಟ ಸಿದ್ಧಾಂತ್ ಚತುರ್ವೇಧಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ‘ಲಾಪತಾ ಲೇಡೀಸ್’ ಸಿನಿಮಾದಲ್ಲಿ ಗಮನಸೆಳೆದ ಪ್ರತಿಭಾ ರಂತಾ ಆಯ್ಕೆಯಾಗಿದ್ದಾರೆ. ಇದು ಅವರ ಮೂರನೇ ಬಾಲಿವುಡ್ ಸಿನಿಮಾ.

‘ಡಿಯರ್ ಕಾಮ್ರೆಡ್’ ಒಂದು ಕ್ರಿಕೆಟ್ ಆಟಗಾರ್ತಿ ಮತ್ತು ಆಕೆಯ ಪ್ರಿಯಕರನ ಕಥೆಯನ್ನು ಒಳಗೊಂಡಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಇಬ್ಬರೂ ಹೋರಾಡುವ ವಿಷಯವೇ ಚಿತ್ರದ ಕೇಂದ್ರಬಿಂದು. ಹಿಂದಿ ಆವೃತ್ತಿಯಲ್ಲಿ ಕಥೆಗೆ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!