Monday, September 22, 2025

CINE | ದಾಖಲೆ ನಿರ್ಮಿಸಿದ ‘ಲೋಕಃ ಚಾಪ್ಟರ್ 1’: OTT ರಿಲೀಸ್ ವಿಚಾರದಲ್ಲಿ ಪ್ರೇಕ್ಷಕರಿಗೆ ಬೇಸರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

25 ದಿನಗಳನ್ನು ಪೂರೈಸಿರುವ ‘ಲೋಕಃ: ಚಾಪ್ಟರ್ 1-ಚಂದ್ರ’ (Lokah) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿದೆ. ಕೇವಲ ಕೇರಳವಲ್ಲ, ಕರ್ನಾಟಕದಲ್ಲಿಯೂ ಉತ್ತಮ ಕಲೆಕ್ಷನ್ ಗಳಿಸಿರುವ ಈ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. 30-40 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ಅದರ ಮೂರ್ನಾಲ್ಕು ಪಟ್ಟು ಹೆಚ್ಚು ಗಳಿಕೆ ದಾಖಲಿಸಿದೆ.

ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಸ್ಲೇನ್ ಸಹ ಅಭಿನಯಿಸಿದ್ದಾರೆ. ಜೊತೆಗೆ ದುಲ್ಕರ್ ಸಲ್ಮಾನ್, ಸೌಬಿನ್ ಶಾಹಿರ್ ಸೇರಿದಂತೆ ಹಲವರು ಅತಿಥಿ ಪಾತ್ರಗಳ ಮೂಲಕ ಕಂಗೊಳಿಸಿದ್ದಾರೆ. ಕೇವಲ 25 ದಿನಗಳಲ್ಲಿ ಸಿನಿಮಾ 270 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಮೋಹನ್ ಲಾಲ್ ಅವರ ‘ಲುಸಿಫರ್ 2’ ದಾಖಲೆಯನ್ನು ಮುರಿದಿದೆ. 25ನೇ ದಿನ ಮಾತ್ರವೇ 4 ಕೋಟಿ ರೂ. ಕಲೆಕ್ಷನ್ ದಾಖಲಿಸಿರುವುದು ಚಿತ್ರದ ಭರ್ಜರಿ ಯಶಸ್ಸಿಗೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಒಟಿಟಿ ರಿಲೀಸ್ ಕುರಿತು ಹರಿದಾಡುತ್ತಿದ್ದ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ದುಲ್ಕರ್ ಸಲ್ಮಾನ್, “ಲೋಕಃ ಸಿನಿಮಾ ಸದ್ಯಕ್ಕಂತೂ ಒಟಿಟಿಗೆ ಬರುವುದಿಲ್ಲ. ಫೇಕ್ ಸುದ್ದಿಗಳನ್ನು ನಿರ್ಲಕ್ಷಿಸಿ, ಅಧಿಕೃತ ಘೋಷಣೆಗೆ ಕಾಯಿರಿ” ಎಂದು ಸ್ಪಷ್ಟನೆ ನೀಡಿದ್ದಾರೆ. ದಸರಾ ಹಬ್ಬದ ಸೀಸನ್ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.

‘ಲೋಕಃ’ ಸರಣಿಯಲ್ಲಿ ಒಟ್ಟು ಐದು ಚಿತ್ರಗಳು ಬರಲಿವೆ ಎಂದು ನಿರ್ಮಾಪಕರು ಹೇಳಿದ್ದು, ಮೊದಲ ಭಾಗವೇ ಇಷ್ಟು ಯಶಸ್ಸು ಕಂಡಿರುವುದರಿಂದ ಮುಂದಿನ ಚಿತ್ರಗಳತ್ತ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಕೆಲವು ದೃಶ್ಯಗಳ ಬಗ್ಗೆ ವಿವಾದ ಎದ್ದರೂ, ನಂತರ ತಿದ್ದುಪಡಿ ಮಾಡಿ ಕ್ಷಮೆ ಕೇಳಿದ ಪರಿಣಾಮ ಸಿನಿಮಾ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯಿತು.

ಇದನ್ನೂ ಓದಿ