Sunday, November 9, 2025

CINE | ‘ಸು ಫ್ರಮ್ ಸೋ’ OTT ವರ್ಷನ್​ನಲ್ಲಿ ರನ್ ಟೈಮ್ ವ್ಯತ್ಯಾಸ: ಏಳು ನಿಮಿಷಗಳ ದೃಶ್ಯಕ್ಕೆ ಕತ್ತರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡ ‘ಸು ಫ್ರಮ್ ಸೋ’ ಸಿನಿಮಾ ಇದೀಗ ಒಟಿಟಿಗೆ ಕಾಲಿಟ್ಟಿದೆ. ಸೆಪ್ಟೆಂಬರ್ 9ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಲು ಅವಕಾಶ ದೊರಕಿದೆ. ಚಿತ್ರವನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡಲು ಸಾಧ್ಯವಾಗದ ಪ್ರೇಕ್ಷಕರಿಗೆ ಈಗ ಮನೆಯಿಂದಲೇ ಆನಂದಿಸಬಹುದಾದ ಅವಕಾಶ ದೊರೆತಿದೆ.

ಜುಲೈ 25ರಂದು ಬಿಡುಗಡೆಯಾದ ಈ ಸಿನಿಮಾ 45 ದಿನಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಪ್ರೀಮಿಯರ್ ಶೋಗಳಲ್ಲೇ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದ್ದು, ಬಾಯ್ಮಾತಿನ ಪ್ರಚಾರ ಚಿತ್ರಕ್ಕೆ ಇನ್ನಷ್ಟು ಯಶಸ್ಸು ತಂದುಕೊಟ್ಟಿತ್ತು. ಇದೀಗ ಒಟಿಟಿಯಲ್ಲೂ ಅದೇ ಮಟ್ಟದ ವೀಕ್ಷಣೆ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ರನ್ ಟೈಮ್ ಕುರಿತು ಚರ್ಚೆ:
ಚಿತ್ರದ ಅವಧಿ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಬುಕ್ ಮೈ ಶೋದಲ್ಲಿ 2 ಗಂಟೆ 17 ನಿಮಿಷ ಎಂದು ಉಲ್ಲೇಖಿಸಿದರೆ, ಒಟಿಟಿಯಲ್ಲಿ 2 ಗಂಟೆ 10 ನಿಮಿಷ ಎಂದು ಮಾತ್ರ ತೋರಿಸುತ್ತಿದೆ. ಏಳು ನಿಮಿಷದ ವ್ಯತ್ಯಾಸಕ್ಕೆ ಕಾರಣವೇನು ಎನ್ನುವುದರ ಕುರಿತು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಕೊನೆಯಲ್ಲಿ ಧನ್ಯವಾದ ಹೇಳುವ ಭಾಗವನ್ನು ಒಟಿಟಿಯಲ್ಲಿ ತೆಗೆದುಹಾಕಿರುವ ಕಾರಣ ಅವಧಿ ಕಡಿಮೆಯಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಿರುವುದು ಚಿತ್ರದ ತಂಡವೇ.

‘ಸು ಫ್ರಮ್ ಸೋ’ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದು, ಜೆಪಿ ತುಮಿನಾಡ್ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಗುರುಜಿ ಪಾತ್ರದಲ್ಲಿ, ಜೆಪಿ ಕೂಡಾ ಗುರುಜಿ ಪಾತ್ರದಲ್ಲೇ ಮಿಂಚಿದ್ದು, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

error: Content is protected !!