Friday, January 9, 2026

CINE | ಯಶ್ ‘ಟಾಕ್ಸಿಕ್’ ಅವತಾರಕ್ಕೆ ದಕ್ಷಿಣ ಭಾರತವೇ ಫಿದಾ: ನಿರ್ದೇಶಕಿಯ ಮೇಕಿಂಗ್‌ಗೆ ವರ್ಮಾ ಜೈಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಈ ಬಾರಿ “ಟಾಕ್ಸಿಕ್” ಚಿತ್ರತಂಡ ಅದ್ಭುತವಾದ ಉಡುಗೊರೆ ನೀಡಿದೆ. ಯಶ್ ಅವರನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗದ ಅಭಿಮಾನಿಗಳಿಗೆ, ಚಿತ್ರತಂಡ ಬಿಡುಗಡೆ ಮಾಡಿದ ಕ್ಯಾರೆಕ್ಟರ್ ಇಂಟ್ರೊಡಕ್ಷನ್ ಟೀಸರ್ ಹೊಸ ಹುರುಪು ತುಂಬಿದೆ. ಈ ಟೀಸರ್ ಕೇವಲ ಅಭಿಮಾನಿಗಳಲ್ಲಿ ಮಾತ್ರವಲ್ಲದೆ, ಚಿತ್ರರಂಗದ ದಿಗ್ಗಜರಲ್ಲೂ ಕುತೂಹಲ ಮೂಡಿಸಿದೆ.

ವಿವಾದಿತ ಹಾಗೂ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ಟಾಕ್ಸಿಕ್’ ಟೀಸರ್ ನೋಡಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ವಿಶೇಷವಾಗಿ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕೆಲಸವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಈ ಟೀಸರ್ ಅನ್ನು ಒಬ್ಬ ಮಹಿಳಾ ನಿರ್ದೇಶಕಿ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಮೇಕಿಂಗ್ ವಿಷಯದಲ್ಲಿ ಇವರು ಯಾವ ಪುರುಷ ನಿರ್ದೇಶಕರಿಗೂ ಕಮ್ಮಿಯಿಲ್ಲ. ಗೀತು ಮೋಹನ್‌ದಾಸ್ ಅವರ ವಿಷನ್ ಅದ್ಭುತವಾಗಿದೆ,” ಎಂದು ವರ್ಮಾ ಬರೆದುಕೊಂಡಿದ್ದಾರೆ.

ಹುಟ್ಟುಹಬ್ಬದ ಆಚರಣೆ ಇಲ್ಲದಿದ್ದರೂ, ಯಶ್ ಅವರ ಹೊಸ ಲುಕ್ ಮತ್ತು ಟೀಸರ್‌ನ ಗುಣಮಟ್ಟ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಟಾಕ್ಸಿಕ್’ ಟ್ರೆಂಡ್ ಸೃಷ್ಟಿಸುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.

error: Content is protected !!