Thursday, October 2, 2025

CINE | OTTಗೆ ಬಂದ್ರು ಥಿಯೇಟರ್‌ನಲ್ಲಿ ನಿಲ್ತಿಲ್ಲ ‘ಸು ಫ್ರಮ್ ಸೋ’ ಕಲೆಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಸಿನಿಮಾಗಳು ಒಟಿಟಿಗೆ ಬಂದ ತಕ್ಷಣವೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಕುಗ್ಗುತ್ತದೆ. ಆದರೆ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರ ಇದಕ್ಕೆ ಅಪವಾದವಾಗಿದೆ. ಈ ಸಿನಿಮಾ ಸೆಪ್ಟೆಂಬರ್ 9ರಂದು ಒಟಿಟಿಗೆ ಬಂದರೂ, ಇನ್ನೂ ಹಲವೆಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ತಗ್ಗದೇ ಮುಂದುವರಿಯುತ್ತಿರುವುದು ಚಿತ್ರದ ಜನಪ್ರಿಯತೆಯ ಸಾಕ್ಷಿಯಾಗಿದೆ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಯಿತು. ಸುಮಾರು 46 ದಿನಗಳ ಕಾಲ ಹೌಸ್‌ಫುಲ್ ಪ್ರದರ್ಶನ ಕಂಡ ನಂತರ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಬಿಡುಗಡೆ ನಂತರ ಒಂದೇ ದಿನದಲ್ಲಿ 6 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ದಾಖಲೆ ಈ ಚಿತ್ರಕ್ಕಿದೆ.

ಸೆಪ್ಟೆಂಬರ್ 9ರಂದು ಒಟಿಟಿಯಲ್ಲಿ ಬಿಡುಗಡೆಯಾದ ದಿನವೇ ಈ ಸಿನಿಮಾ 5 ಲಕ್ಷ ರೂಪಾಯಿ ಕಲೆಕ್ಷನ್ ಗಳಿಸಿದೆ. ಒಟಿಟಿ ಬಿಡುಗಡೆಗೊಂಡರೂ ಜನರು ಇನ್ನೂ ಥಿಯೇಟರ್‌ಗಳಲ್ಲಿ ಚಿತ್ರ ವೀಕ್ಷಿಸುತ್ತಿರುವುದು ಆಶ್ಚರ್ಯದ ಸಂಗತಿ. ಅನೇಕರಿಗೆ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂಬ ಮಾಹಿತಿ ಇಲ್ಲದೇ ಇರಬಹುದೆಂಬುದೂ ಕಾರಣವಾಗಿರಬಹುದು.

ರಾಜ್ ಬಿ ಶೆಟ್ಟಿ ನಿರ್ಮಾಣ ಮತ್ತು ಅಭಿನಯವಿರುವ ಈ ಚಿತ್ರ ವಿಶ್ವದಾದ್ಯಂತ 122.34 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಭಾರತದಲ್ಲಿ 107.34 ಕೋಟಿ ರೂ. ಕಲೆಕ್ಷನ್ ಆಗಿದ್ದು, ವಿದೇಶದಿಂದ 15 ಕೋಟಿ ರೂ. ಬಂದಿವೆ. ನಿರ್ಮಾಪಕರಾಗಿ ರಾಜ್ ಬಿ ಶೆಟ್ಟಿ ಭಾರೀ ಲಾಭ ಕಂಡಿದ್ದಾರೆ.