ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಅಪರೂಪದ ಸಾಧನೆ ಮಾಡಿದ ಸಿನಿಮಾ ‘ಸು ಫ್ರಮ್ ಸೋ’. ರಿಲೀಸ್ ಆಗಿ 45 ದಿನಗಳು ಕಳೆದರೂ ಚಿತ್ರ ಇನ್ನೂ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಭಾನುವಾರ (ಸೆಪ್ಟೆಂಬರ್ 7) 45ನೇ ದಿನವೂ ಚಿತ್ರವು ಬರೋಬ್ಬರಿ 37 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸಿನಿಮಾವೊಂದು ಇಷ್ಟು ದೀರ್ಘಾವಧಿಯ ನಂತರವೂ ಗಳಿಕೆ ಮುಂದುವರಿಸಿರುವುದು ಇದೇ ಮೊದಲು ಎಂಬುದಾಗಿ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.
ಒಟ್ಟು ಕಲೆಕ್ಷನ್ ದಾಖಲೆ
‘ಸು ಫ್ರಮ್ ಸೋ’ ಸಿನಿಮಾದ ಒಟ್ಟು ಕಲೆಕ್ಷನ್ ಈಗಾಗಲೇ 122 ಕೋಟಿ ರೂ. ತಲುಪಿದೆ. ಇದರಲ್ಲಿ ದೇಶೀಯ ಹಾಗೂ ವಿದೇಶಿ ಕಲೆಕ್ಷನ್ ಸೇರಿದೆ. ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 107 ಕೋಟಿ ರೂ. ಗಳಿಸಿದ್ದು, ವಿದೇಶದಿಂದ 15 ಕೋಟಿ ರೂ. ಗಳಿಸಿದೆ. ತೆಲುಗು ಭಾಷೆಯಲ್ಲಿ 2.23 ಕೋಟಿ, ಮಲಯಾಳಂನಲ್ಲಿ 5.65 ಕೋಟಿ ರೂ. ಬೇಟೆ ಹೊಡೆದಿದೆ.
ಚಿತ್ರದ ಒಟಿಟಿ ಹಕ್ಕನ್ನು ಜಿಯೋ ಹಾಟ್‌ಸ್ಟಾರ್ ಪಡೆದುಕೊಂಡಿದ್ದು, ಸೆಪ್ಟೆಂಬರ್ 9ರಿಂದ ಪ್ರಸಾರ ಮಾಡಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಮಾಹಿತಿ ನೀಡಿದೆ. ಅಲ್ಲದೆ, ನವರಾತ್ರಿ ಸಂದರ್ಭದಲ್ಲಿ ಸಿನಿಮಾ ಟಿವಿಯಲ್ಲೂ ಪ್ರಸಾರ ಕಾಣುವ ಸಾಧ್ಯತೆ ಇದೆ.
ರಾಜ್ ಬಿ ಶೆಟ್ಟಿ ನಿರ್ಮಾಣ, ಜೆಪಿ ತುಮಿನಾಡು ನಿರ್ದೇಶನದ ಈ ಸಿನಿಮಾ ಸಣ್ಣ ಬಜೆಟ್‌ನಲ್ಲೇ ಭರ್ಜರಿ ಯಶಸ್ಸು ಕಂಡಿದೆ. ಕಥೆ, ನಿರ್ದೇಶನ ಮತ್ತು ಪಾತ್ರಧಾರಿಗಳ ಅಭಿನಯವೇ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕವೂ ‘ಸು ಫ್ರಮ್ ಸೋ’ ಸಿನಿಮಾ ಇನ್ನೂ ಕೆಲವು ವಾರಗಳ ಕಾಲ ಥಿಯೇಟರ್‌ಗಳಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರದಿಂದ ಸಿನಿಮಾ ಇನ್ನಷ್ಟು ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆ ಇದೆ.