ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 25ರಂದು ತೆರೆಕಂಡು ಯಶಸ್ಸಿನ ಅಲೆ ಎಬ್ಬಿಸಿದ್ದ ‘ಸು ಫ್ರಮ್ ಸೋ’ ಸಿನಿಮಾ ಇದೀಗ ಟಿವಿ ಪ್ರೇಕ್ಷಕರ ಮನರಂಜನೆಗೆ ಬರಲಿದೆ. ಒಟಿಟಿಯಲ್ಲಿ ಬಿಡುಗಡೆಯಾದ ನಂತರ ಇದೀಗ ಈ ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರಗೊಳ್ಳುತ್ತಿದೆ. ವಾಹಿನಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಅಕ್ಟೋಬರ್ 12ರಂದು ಸಂಜೆ 6 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ ಎಂದು ಘೋಷಿಸಲಾಗಿದೆ.
ಜೆಪಿ ತುಮಿನಾಡ್ ನಿರ್ದೇಶನದ ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ಮಿಸಿದ್ದರು. ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ ಪಾಣಾಜೆ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲದೆ ಸಿನಿಮಾ ಭಾರೀ ಯಶಸ್ಸು ಕಂಡು 100 ಕೋಟಿ ಕ್ಲಬ್‌ಗೆ ಸೇರಿತ್ತು. ಇದರಿಂದ ಸಿನಿಮಾದ ಬಲಿಷ್ಠ ಕಥಾಹಂದರ ಮತ್ತು ವಿಭಿನ್ನ ನಿರೂಪಣೆಯು ಪ್ರೇಕ್ಷಕರ ಮನ ಗೆದ್ದಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಕೌಟುಂಬಿಕ ಹಾಸ್ಯವನ್ನೂ, ಜೊತೆಗೆ ಗಂಭೀರ ಸಾಮಾಜಿಕ ಸಂದೇಶವನ್ನೂ ಒಟ್ಟಿಗೆ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ. ವಿಶೇಷವಾಗಿ ಕುಟುಂಬದಿಂದಲೇ ಸಂಭವಿಸುವ ಲೈಂಗಿಕ ದೌರ್ಜನ್ಯ ಎಂಬ ಗಂಭೀರ ವಿಷಯವನ್ನು ಸಿನಿಮಾ ಸ್ಪರ್ಶಿಸಿದ್ದು, ಇದನ್ನು ಧೈರ್ಯವಾಗಿ ತೆರೆಗೆ ತಂದಿದ್ದಕ್ಕಾಗಿ ಪ್ರೇಕ್ಷಕರು ಪ್ರಶಂಸಿಸಿದ್ದಾರೆ. ಹಾಸ್ಯ-ಮನರಂಜನೆಯ ಜೊತೆಗೆ ಉತ್ತಮ ಸಂದೇಶ ನೀಡುವ ಚಿತ್ರವಾಗಿ ಇದು ಗಮನಸೆಳೆದಿದೆ.
ಈಗ ಟಿವಿ ಪ್ರೀಮಿಯರ್ ಘೋಷಣೆ ಬಂದಿರುವುದರಿಂದ, ಥಿಯೇಟರ್ ಅಥವಾ ಒಟಿಟಿಯಲ್ಲಿ ನೋಡಲು ಸಾಧ್ಯವಾಗದಿದ್ದ ಪ್ರೇಕ್ಷಕರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಿತ್ರವನ್ನು ಆನಂದಿಸಬಹುದಾಗಿದೆ.