Sunday, November 2, 2025

CINE | ಬಾಕ್ಸ್ ಆಫೀಸ್ ಬಿಟ್ಟು ಹಿಮಾಲಯದತ್ತ ‘ತಲೈವಾ’! ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರಾ ರಜನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಕ್ರೇಜ್ ಕಾ ಬಾಪ್ ಎಂದೇ ಖ್ಯಾತರಾಗಿರುವ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹೆಸರು ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾಗಳನ್ನು ನೀಡಿ, ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಈ ವಿಶ್ವ ಮೆಚ್ಚಿದ ಸ್ಟಾರ್, ಸದ್ಯ ಚಿತ್ರರಂಗಕ್ಕೆ ವಿದಾಯ ಹೇಳುವ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ರಜನಿಕಾಂತ್ ಅವರ ಕೈಯಲ್ಲಿ ಸದ್ಯಕ್ಕೆ ನೂರಾರು ಕೋಟಿ ಮೌಲ್ಯದ ನಾಲ್ಕು ಬೃಹತ್ ಪ್ರಾಜೆಕ್ಟ್‌ಗಳಿವೆ. ಇತ್ತೀಚೆಗೆ ಅವರು ‘ಜೈಲರ್ 2’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ, ಬಹುನಿರೀಕ್ಷಿತ ಕಮಲ್ ಹಾಸನ್ ಅವರೊಂದಿಗಿನ ಕಾಂಬೋ ಚಿತ್ರವೊಂದು ಈಗಾಗಲೇ ಘೋಷಣೆಯಾಗಿದೆ. ಡೈರೆಕ್ಟರ್ ನೆಲ್ಸನ್ ಅವರ ಜೊತೆಗಿನ ಇನ್ನೊಂದು ಚಿತ್ರ ಮತ್ತು ನಿರ್ಮಾಪಕ ಸಿ. ಸುಂದರ್ ಅವರೊಂದಿಗಿನ ಪ್ರಾಜೆಕ್ಟ್‌ಗಳಿಗೂ ರಜನಿಕಾಂತ್ ಡೇಟ್ಸ್ ನೀಡಿದ್ದಾರೆ. ಈ ಎಲ್ಲಾ ಯೋಜನೆಗಳನ್ನು ನೋಡಿದರೆ, ರಜನಿಕಾಂತ್ ಅವರು 2027ರವರೆಗೆ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗವಹಿಸುವಷ್ಟು ಕೆಲಸಗಳು ಕೈಯಲ್ಲಿವೆ. ಇಷ್ಟೆಲ್ಲಾ ಪ್ರಾಜೆಕ್ಟ್‌ಗಳು ಸಾಲುಗಟ್ಟಿ ನಿಂತಿರುವಾಗಲೇ, ಸೂಪರ್‌ಸ್ಟಾರ್ ಅವರು ನಿವೃತ್ತಿ ತೆಗೆದುಕೊಳ್ಳುವ ಮಾತುಗಳು ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ.

ವಿದಾಯಕ್ಕೆ ಕಾರಣ ರಾಜಕೀಯವಲ್ಲ, ಬದಲಿಗೆ…

ರಜನಿಕಾಂತ್ ಕುರಿತು ನಿವೃತ್ತಿ ಸುದ್ದಿ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಹಿಂದೆ ರಾಜಕೀಯ ಪ್ರವೇಶದ ಸಂದರ್ಭದಲ್ಲಿಯೂ ಅವರು ಚಿತ್ರರಂಗಕ್ಕೆ ವಿದಾಯ ಹೇಳುವ ನಿರ್ಧಾರ ಮಾಡಿದ್ದರು, ಆದರೆ ಆರೋಗ್ಯದ ಕಾರಣದಿಂದ ರಾಜಕೀಯದಿಂದ ಹಿಂದೆ ಸರಿದು ಮತ್ತೆ ನಟನೆಯನ್ನು ಮುಂದುವರೆಸಿದ್ದರು.

ಆದರೆ, ಈ ಬಾರಿ ಅವರ ವಿದಾಯದ ನಿರ್ಧಾರಕ್ಕೆ ರಾಜಕೀಯ ಪ್ರವೇಶ ಕಾರಣವಲ್ಲ. ಸದ್ಯಕ್ಕೆ ರಜನಿಕಾಂತ್ ಅವರು ಮನೆಗೆ ಬರುವ ನಿರ್ದೇಶಕರಿಂದ ಕಥೆ ಪಟ್ಟಿಯನ್ನು ಮತ್ತು ನಿರ್ಮಾಪಕರಿಂದ ಚೆಕ್‌ಬುಕ್ ಅನ್ನು ವಾಪಸ್ ಕಳುಹಿಸುತ್ತಿದ್ದಾರಂತೆ. ಈ ವಿಷಯವೇ ನಿವೃತ್ತಿಯ ವದಂತಿಗಳಿಗೆ ಕಾರಣವಾಗಿದೆ.

ವಾಸ್ತವವಾಗಿ, ರಜನಿಕಾಂತ್ ಅವರಿಗೆ ವಯಸ್ಸು 70 ದಾಟಿದೆ. ಈ ವಯಸ್ಸಿನಲ್ಲಿ ದೇಹ ಸಹಜವಾಗಿಯೇ ಕ್ಷೀಣಿಸುತ್ತದೆ, ಸುಸ್ತೂ ಜಾಸ್ತಿಯಾಗುತ್ತದೆ. ಆದರೆ ಇದಕ್ಕಿಂತ ಮುಖ್ಯವಾದ ಕಾರಣ ಬೇರೆಯೇ ಇದೆ: ಆಧ್ಯಾತ್ಮದ ಕಡೆಗೆ ಹೆಚ್ಚಿದ ಒಲವು.

ಸರಳ ಜೀವನಶೈಲಿಗೆ ಒಗ್ಗಿಕೊಂಡಿರುವ ರಜನಿಕಾಂತ್, ವರ್ಷಕ್ಕೊಮ್ಮೆ ಆಧ್ಯಾತ್ಮಿಕ ಪ್ರವಾಸ ಮಾಡುತ್ತಾರೆ. ಮನಸ್ಸಾದಾಗಲೆಲ್ಲಾ ಹುಟ್ಟೂರು ಬೆಂಗಳೂರಿಗೆ ಬಂದು ಯಾರಿಗೂ ತಿಳಿಯದಂತೆ ಕಾಲ ಕಳೆಯುತ್ತಾರೆ. ಎಲ್ಲಾ ಮೋಹಗಳನ್ನೂ ತ್ಯಜಿಸಿ ಬದುಕುವ ಈ ಸೂಪರ್‌ಸ್ಟಾರ್‌ಗೆ, ವಯಸ್ಸು ಹೆಚ್ಚಿದಂತೆ ಮನಸ್ಸು ಮತ್ತಷ್ಟು ಮಾಗುತ್ತಿದೆ. ಹೀಗಾಗಿ, ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿ, ನಂತರ ಹೊಸ ಚಿತ್ರಗಳ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿ, ಸದ್ಯಕ್ಕೆ ಯಾವುದೇ ಹೊಸ ಪ್ರಸ್ತಾವಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಈ ನಡೆಗಳೇ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

error: Content is protected !!