ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಏಳು ದಿನಗಳಾದರೂ, ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಅಬ್ಬರ ಮುಂದುವರಿದಿದೆ. ವೀಕೆಂಡ್ ನಂತರ ಕಲೆಕ್ಷನ್ ಕುಸಿಯಬಹುದು ಎಂದು ಕೆಲವರು ನಿರೀಕ್ಷಿಸಿದ್ದರೂ, ಸಿನಿಮಾ ನಿರಂತರ ಏರಿಕೆಯನ್ನು ದಾಖಲಿಸಿ ಎಲ್ಲ ಅಂದಾಜುಗಳನ್ನು ಉಲ್ಟಾ ಮಾಡಿದೆ.
ಅಕ್ಟೋಬರ್ 7ರಂದು, ಬಿಡುಗಡೆಯಾದ ಬಳಿಕದ ಮೊದಲ ಸೋಮವಾರ, ಸಿನಿಮಾ ಭಾರತದಾದ್ಯಂತ 31.5 ಕೋಟಿ ರೂಪಾಯಿ ಗಳಿಕೆ ಮಾಡಿತು. ಅದರಲ್ಲೂ ಕರ್ನಾಟಕದಲ್ಲಿ ಬಾಹುಬಲಿ 2 ದಾಖಲೆಯನ್ನು ಮುರಿದು, ಸೋಮವಾರ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಗುರುತಿಸಲ್ಪಟ್ಟಿತು.
ಮಂಗಳವಾರ (ಅಕ್ಟೋಬರ್ 8) ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ 33.50 ಕೋಟಿಗೆ ಏರಿತು. ಇದು ಸೋಮವಾರಕ್ಕಿಂತ ಎರಡು ಕೋಟಿ ಹೆಚ್ಚಾಗಿದ್ದು, ಚಿತ್ರದ ಒಟ್ಟು ಭಾರತ ಮಟ್ಟದ ಕಲೆಕ್ಷನ್ 290 ಕೋಟಿಯನ್ನು ದಾಟಿಸಿದೆ. ಬುಧವಾರದ ಅಂತ್ಯದ ವೇಳೆಗೆ ಸಿನಿಮಾ 300 ಕೋಟಿ ರೂಪಾಯಿಗಳ ಕ್ಲಬ್ ಸೇರುವ ನಿರೀಕ್ಷೆಯಿದೆ.
ಸಾಮಾನ್ಯವಾಗಿ ವಾರದ ದಿನಗಳಲ್ಲಿ ಸಿನಿಮಾಗಳ ಕಲೆಕ್ಷನ್ ಕುಸಿಯುತ್ತದೆ. ಆದರೆ ಈ ಸಿನಿಮಾ ಅಚ್ಚರಿಯ ಏರಿಕೆ ತೋರಿಸುತ್ತಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬುಧವಾರಕ್ಕೂ ಮುಂಗಡ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಆರಂಭದಲ್ಲಿ ಅಭಿಮಾನಿಗಳು ಚಿತ್ರಮಂದಿರಗಳಿಗೆ ಹರಿದು ಬಂದರೆ, ಈಗ ಕುಟುಂಬ ಪ್ರೇಕ್ಷಕರೂ ಸಿನಿಮಾ ನೋಡಲು ಬರುತ್ತಿದ್ದಾರೆ.
ಭಾರತೀಯ ಸಿನಿರಂಗದಲ್ಲಿ ಸೀಕ್ವೆಲ್ ಸಿನಿಮಾಗಳು ‘ಬಾಹುಬಲಿ 2’, ‘ಕೆಜಿಎಫ್ 2’, ‘ಪುಷ್ಪ 2’ ಮುಂತಾದವುಗಳು ದೊಡ್ಡ ಕಲೆಕ್ಷನ್ ಮಾಡಿರುವುದನ್ನು ನಾವು ಕಂಡಿದ್ದೇವೆ. ಆದರೆ ಪ್ರೀಕ್ವೆಲ್ ಸಿನಿಮಾವೊಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲೆಕ್ಷನ್ ಮಾಡಿರುವುದು ಇದೇ ಮೊದಲು. 2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿರುವ ‘ಕಾಂತಾರ: ಚಾಪ್ಟರ್ 1’ ಈ ದಾಖಲೆಗೆ ಪಾತ್ರವಾಗಿದೆ.