ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿರುವ Landlord ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಹೊಸ ಕುತೂಹಲ ಹೆಚ್ಚುತ್ತಿದೆ. ದುನಿಯಾ ವಿಜಯ್ ಅಭಿನಯದ ಈ ಚಿತ್ರವನ್ನು ‘ಕಾಟೇರ’ ಕಥೆಗಾರರಾಗಿರುವ ಜಡೇಶ್ ಹಂಪಿ ನಿರ್ದೇಶಿಸಿದ್ದು, ಕಥೆಯಲ್ಲೇ ಗಾಢ ರಗಡ್ ಶೈಲಿ ಇರುತ್ತದೆ ಎಂಬ ಸುಳಿವು ಈಗಾಗಲೇ ದೊರೆತಿದೆ.
ಡಬ್ಬಿಂಗ್ ಹಂತದಲ್ಲೇ ವಿಜಯ್ ಅವರ ಅಭಿನಯದ ತೀವ್ರತೆ ಬಗ್ಗೆ ಸಿನಿವಲಯದಲ್ಲಿ ಮಾತುಗಳು ಹರಿದಾಡುತ್ತಿವೆ. ಇದರ ನಡುವೆಯೇ ಚಿತ್ರದ ‘ದಿ ರೂಲರ್’ ಎಂಬ ವಿಶೇಷ ಪಾತ್ರದ ಕುರಿತು ಹೊಸ ಟೀಸರ್ ಸುದ್ದಿ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸಾಮಾನ್ಯ ಪಾತ್ರಗಳ ಜೊತೆಗೆ ತೀವ್ರತೆ ಹೊಂದಿರುವ ಶೇಡ್‌ಗಳಲ್ಲಿ ಕಥೆ ಸಾಗಲಿದ್ದು, ವಿಜಯ್ ಪಾತ್ರಕ್ಕೆ ಬಲ ನೀಡುವಂತೆ ರಚಿತಾ ರಾಮ್ ನಿಂಗವ್ವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ವಿಜಯ್ ಅವರ ಹಿರಿಯ ಪುತ್ರಿ ರಿತನ್ಯಾ ವಿಜಯ್ ಅವರಿಗೂ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ. ಆದರೆ ಈ ಎಲ್ಲದರ ನಡುವೆ ‘ದಿ ರೂಲರ್’ ಪಾತ್ರವೇ ಈಗ ಚಿತ್ರದ ದೊಡ್ಡ ಸಸ್ಪೆನ್ಸ್ ಆಗಿ ಉಳಿದಿದೆ.
ಇತ್ತೀಚೆಗೆ ಬಿಡುಗಡೆ ಮಾಡಿದ ಫಸ್ಟ್ ಲುಕ್ ಟೀಸರ್‌ನಲ್ಲಿ ಈ ಪಾತ್ರದ ಕ್ರೂರತೆಯ ಝಲಕ್ ಮಾತ್ರ ಕಾಣಿಸಿಕೊಂಡಿದೆ. ರೂಲರ್ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಪಾತ್ರವನ್ನು ರಾಜ್ ಬಿ ಶೆಟ್ಟಿ ಮಾಡಿದ್ದಾರೆ ಎನ್ನುವ ಮಾತುಗಳು ಜೋರಾಗಿವೆ. ಡಿಸೆಂಬರ್ 8ರಂದು ಮಧ್ಯಾಹ್ನ 12.26ಕ್ಕೆ ಅಧಿಕೃತ ಟೀಸರ್ ಬಿಡುಗಡೆಯಾಗಲಿದ್ದು, ಅಂದೇ ಈ ರಹಸ್ಯಕ್ಕೆ ತೆರೆ ಬೀಳಲಿದೆ.

