Monday, November 10, 2025

CINE | ನಾನು ಇಷ್ಟು ಸುಂದರವಾಗಿ ಕಾಣಲು ಕಾರಣ ನಮ್ಮ ಮಂಗಳೂರು ಊಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ತಾವು ಹುಟ್ಟಿದ ತುಳುನಾಡು ಮತ್ತು ಕನ್ನಡ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿದರು.

ಸುನೀಲ್ ಶೆಟ್ಟಿ ಅವರು ಕನ್ನಡದಲ್ಲಿಯೇ ಮಾತು ಶುರು ಮಾಡಿ, “ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ, ಆದರೆ ಅರ್ಥ ಆಗುತ್ತೆ. ತುಳು ಭಾಷೆ ನನಗೆ ಚೆನ್ನಾಗಿ ಬರುತ್ತೆ, ಹಾಗಾಗಿ ತುಳುನಲ್ಲೇ ಮಾತಾಡ್ತೀನಿ,” ಎಂದು ತಿಳಿಸಿದರು.

ತುಳುನಾಡು ಮತ್ತು ಕನ್ನಡದ ಪ್ರೀತಿ:

“ನಾನು ಹುಟ್ಟಿದ್ದು ತುಳುನಾಡಲ್ಲಿ ಅನ್ನೋದಕ್ಕೆ ಹೆಮ್ಮೆ ಆಗುತ್ತೆ. ಇದೊಂದು ತುಳು ಮತ್ತು ಕನ್ನಡದ ಸಿನಿಮಾ ಅನ್ನೋದು ಮತ್ತಷ್ಟು ಹೆಮ್ಮೆ ಅನ್ಸುತ್ತೆ. ರೂಪೇಶ್ ಶೆಟ್ಟಿ ನನ್ನ ತಮ್ಮ. ನಾನು ತುಳು ಸಿನಿಮಾಗಳಿಗೆ ಯಾವಾಗಲೂ ಸಪೋರ್ಟ್ ಮಾಡುತ್ತೇನೆ,” ಎಂದು ಸುನೀಲ್ ಶೆಟ್ಟಿ ಭರವಸೆ ನೀಡಿದರು.

ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, “ಕನ್ನಡದ ಸಿನಿಮಾಗಳು ಈಗ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿವೆ. ‘ಕಾಂತಾರ’ ಚಿತ್ರದ ಮೂಲಕ ಇಡೀ ವಿಶ್ವಕ್ಕೆ ನಮ್ಮ ತುಳು ನಾಡಿನ ಸಂಸ್ಕೃತಿ ಪರಿಚಯ ಆಗಿದೆ,” ಎಂದರು.

ಬೆಂಗಳೂರಿನ ನೆನಪು ಮತ್ತು ಅಣ್ಣಾವ್ರ ಸ್ಮರಣೆ:

“ನಾನು ಕರ್ನಾಟಕದ ಒಂದು ಭಾಗ. ನನ್ನ ಸಹೋದರ ಕೂಡ ಬೆಂಗಳೂರಿನಲ್ಲೇ ಇರೋದು. ಬೆಂಗಳೂರು ಒಂದು ‘ಗ್ರೀನ್ ಸಿಟಿ’. ಇಲ್ಲಿಗೆ ಬಂದಾಗಲೆಲ್ಲ ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ. ಬೆಂಗಳೂರಿನ ಜನರನ್ನು ನೋಡಿ ತುಂಬಾ ಖುಷಿ ಆಗುತ್ತೆ,” ಎಂದು ಸುನೀಲ್ ಶೆಟ್ಟಿ ತಮ್ಮ ಅನುಭವ ಹಂಚಿಕೊಂಡರು. ಅಲ್ಲದೆ, “ಕರ್ನಾಟಕ ಅಂದಾಕ್ಷಣ ನಮಗೆಲ್ಲ ರಾಜ್‌ಕುಮಾರ್ ಸರ್ ನೆನಪಾಗ್ತಾರೆ,” ಎಂದು ಸ್ಮರಿಸಿದರು.

ಸುಂದರ ನೋಟದ ರಹಸ್ಯ: 65 ಅಲ್ಲ, ಕೇವಲ 65!

ಸುನೀಲ್ ಶೆಟ್ಟಿ ತಮ್ಮ ವಯಸ್ಸು ಮತ್ತು ಇಂದಿಗೂ ತಾವು ಸುಂದರವಾಗಿ ಕಾಣಲು ಇರುವ ಕಾರಣವನ್ನು ಹೇಳಿ ನಗೆ ಚಟಾಕಿ ಹಾರಿಸಿದರು. “ನನಗೆ ಇನ್ನೂ ಕೇವಲ 65 ವಯಸ್ಸು ಮಾತ್ರ!” ಎಂದು ಹೇಳಿ, “ನಾನು ಇಷ್ಟೊಂದು ಸುಂದರವಾಗಿ ಕಾಣಲು ಒಂದು ಕಾರಣ ಇದೆ. ಅದು ನಮ್ಮ ತುಳುನಾಡು, ನಮ್ಮ ಮೀನು, ನಮ್ಮ ಸಂಸ್ಕೃತಿ, ನಮ್ಮ ಬೊಂಡ, ನಮ್ಮ ಮಂಗಳೂರು ಊಟವೇ ನನ್ನನ್ನ ಇಷ್ಟೊಂದು ಸುಂದರವಾಗಿ ಕಾಣುವಂತೆ ಮಾಡಿದೆ,” ಎಂದು ತಿಳಿಸಿದರು.

ಕರ್ನಾಟಕದಿಂದ ಬಾಲಿವುಡ್‌ಗೆ ಹೋಗಿ ದೊಡ್ಡ ಹೆಸರು ಮಾಡಿದರೂ, ಇಲ್ಲಿನ ಆಚಾರ-ವಿಚಾರ, ಸಂಸ್ಕೃತಿ, ಪರಂಪರೆಗಳ ಬಗ್ಗೆ ತಾವು ಅಪಾರ ಗೌರವ ಹೊಂದಿರುವುದಾಗಿ ಮತ್ತು ಅವುಗಳನ್ನು ಪಾಲಿಸುವುದಾಗಿ ಸುನೀಲ್ ಶೆಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು. ಇನ್ನು, ಈ ‘ಜೈ’ ಚಿತ್ರದಲ್ಲಿ ಸುನೀಲ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

error: Content is protected !!