Friday, January 9, 2026

CINE | ‘ಟಾಕ್ಸಿಕ್’ ಧಮಾಕಾ: ರಾಕಿ ಭಾಯ್ ಅಭಿಮಾನಿಗಳಿಗೆ ಸಿಗಲಿದೆ ಹೈ-ವೋಲ್ಟೇಜ್ ಟೀಸರ್ ಬೂಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್, ರಾಕಿಂಗ್ ಸ್ಟಾರ್ ಯಶ್ ಜನವರಿ 8ರಂದು ತಮ್ಮ 40ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮವನ್ನು ಇಡೀ ದೇಶಾದ್ಯಂತ ಇರುವ ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸಲು ಸಜ್ಜಾಗಿದ್ದಾರೆ. ಈ ಸುಸಂದರ್ಭದಲ್ಲಿ ಯಶ್ ಅಭಿಮಾನಿಗಳಿಗೆ ಬಹುದೊಡ್ಡ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಗ್ಗೆ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಪ್ರೈಸ್ ನೀಡಿದೆ. ಬಿಡುಗಡೆಯಾಗಿರುವ ಹೊಸ ಪೋಸ್ಟರ್‌ನಲ್ಲಿ ಯಶ್ ಸುತ್ತಲೂ ಬೆಂಕಿ ಆವರಿಸಿದ್ದು, ಮಧ್ಯದಲ್ಲಿ ಮಾಸ್ ಲುಕ್‌ನಲ್ಲಿ ನಿಂತಿರುವ ಯಶ್ ಭಂಗಿ ನೋಡುಗರ ಮೈ ಜುಂ ಎನಿಸುವಂತಿದೆ. ಇದು ಕೇವಲ ಪೋಸ್ಟರ್ ಅಲ್ಲ, ಸಿನಿಮಾ ಎಷ್ಟು ಭೀಕರವಾಗಿರಲಿದೆ ಎಂಬುದಕ್ಕೆ ದೊಡ್ಡ ಸಿಗ್ನಲ್ ಎನ್ನಲಾಗುತ್ತಿದೆ.

ಕಳೆದ ವರ್ಷ ಹುಟ್ಟುಹಬ್ಬದಂದು ಕೇವಲ ಗ್ಲಿಂಪ್ಸ್ ರಿಲೀಸ್ ಆಗಿತ್ತು. ಆದರೆ ಈ ಬಾರಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಗದಂತೆ ಪಕ್ಕಾ ಟೀಸರ್ ಬಿಡುಗಡೆಯಾಗುತ್ತಿದೆ. ಜನವರಿ 8ರಂದು ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಅಧಿಕೃತವಾಗಿ ‘ಟಾಕ್ಸಿಕ್’ ಟೀಸರ್ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಯಶ್ ಯಾವುದೇ ಕೆಲಸ ಕೈಗೆತ್ತಿಕೊಂಡರೂ ಔಟ್‌ಪುಟ್ ಪಕ್ಕಾ ಆಗುವವರೆಗೂ ಗುಟ್ಟು ಬಿಟ್ಟುಕೊಡುವುದಿಲ್ಲ. ಇದೀಗ ಟೀಸರ್ ಘೋಷಣೆ ಮಾಡಿರುವುದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಒಟ್ಟಿನಲ್ಲಿ ಜನವರಿ 8ರಂದು ಸೋಶಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್’ ಅಬ್ಬರ ಶುರುವಾಗುವುದು ಗ್ಯಾರಂಟಿ.

error: Content is protected !!