Wednesday, December 10, 2025

CINE | ಕೌಂಟ್‌ಡೌನ್ ಶುರು ಮಾಡ್ಕೊಂಡ ‘ಟಾಕ್ಸಿಕ್’: ಹೊಸ ಪೋಸ್ಟರ್ ಔಟ್! ಇನ್ನು 100 ದಿನ ಮಾತ್ರ ಬಾಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆಯ ಅಲೆ ಎಬ್ಬಿಸಿರುವ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಬಹುಕಾಲ ಮೌನವಾಗಿದ್ದ ಚಿತ್ರತಂಡ ಇದೀಗ ನಿಧಾನವಾಗಿ ಮಾಹಿತಿಗಳನ್ನು ಹೊರಬಿಡುತ್ತಿದ್ದು, ಹೊಸದಾಗಿ ಬಿಡುಗಡೆ ಮಾಡಿದ ಪೋಸ್ಟರ್ ಸಿನಿ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಹೊಸ ಪೋಸ್ಟರನ್ನು ಸ್ವತಃ ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಕಾಲ್ಪನಿಕ ಕಥೆ ಬಿಡುಗಡೆಗೆ 100 ದಿನಗಳು” ಎಂಬ ಸಂದೇಶದೊಂದಿಗೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಪೋಸ್ಟರ್‌ನಲ್ಲಿ ರಕ್ತದಿಂದ ತುಂಬಿರುವ ಬಾತ್‌ಟಬ್‌ನಲ್ಲಿ ಕುಳಿತಿರುವ ವ್ಯಕ್ತಿಯ ಚಿತ್ರಣವಿದ್ದು, ಪಾತ್ರದ ತೀವ್ರತೆ ಮತ್ತು ಹಿಂಸಾತ್ಮಕ ಸ್ವಭಾವವನ್ನು ಸೂಚಿಸುತ್ತಿದೆ. ಯಶ್ ಮುಖವನ್ನು ಉದ್ದೇಶಪೂರ್ವಕವಾಗಿ ತೋರಿಸದೇ ಇಡಲಾಗಿದ್ದು, ಚಿತ್ರಕಥೆಯ ರಹಸ್ಯವನ್ನು ಉಳಿಸಿಕೊಂಡಿರುವುದು ವಿಶೇಷ. ಹಾಲಿವುಡ್ ಶೈಲಿಯ ಮೆರುಗು, ಡಾರ್ಕ್ ಥೀಮ್ ಮತ್ತು ಬ್ಯಾಕ್ ಟ್ಯಾಟೂ ಸಿನಿರಸಿಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಯುಕ್ತವಾಗಿ ಚಿತ್ರಕ್ಕೆ ಬಂಡವಾಳ ಹೂಡಿವೆ. ಇದು ಕರ್ನಾಟಕದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾವೆಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ರಜೀವ್ ರವಿ ಛಾಯಾಗ್ರಹಣ ಈ ಸಿನಿಮಾಕ್ಕೆ ತಾಂತ್ರಿಕವಾಗಿ ಶಕ್ತಿ ತುಂಬಿವೆ. ‘ಟಾಕ್ಸಿಕ್’ ಸಿನಿಮಾ ಬರುವ ವರ್ಷ ಮಾರ್ಚ್ 19ರಂದು ತೆರೆಕಾಣಲಿದ್ದು, ಈಗಾಗಲೇ ದೇಶವ್ಯಾಪಿ ನಿರೀಕ್ಷೆ ಹುಟ್ಟುಹಾಕಿದೆ.

error: Content is protected !!