ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ವೃಷಭ ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಾಜನ ಕಥೆ, ಪುನರ್ಜನ್ಮದ ಅಂಶ ಮತ್ತು ತಂದೆ-ಮಗನ ಬಾಂಧವ್ಯದ ಭಾವನೆಗಳನ್ನು ಒಟ್ಟುಗೂಡಿಸಿರುವ ಈ ಚಿತ್ರವನ್ನು ಕನ್ನಡದ ಖ್ಯಾತ ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಈ ಬಾರಿ ಅವರು ಮಲಯಾಳಂ ಮತ್ತು ತೆಲುಗು ಚಲನಚಿತ್ರರಂಗದಲ್ಲೂ ಕಾಲಿಟ್ಟಿದ್ದಾರೆ.
ವೃಷಭ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡಿದೆ. ಆದರೆ ಬಿಡುಗಡೆ ಸಂದರ್ಭದಲ್ಲಿ ಕನ್ನಡ, ತಮಿಳು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
ಟೀಸರ್‌ನಲ್ಲಿ ಮೋಹನ್‌ಲಾಲ್ ರಾಜನ ಪಾತ್ರದಲ್ಲಿ ಮಿಂಚಿದ್ದು, ಅವರ ಲುಕ್ ಮತ್ತು ಪ್ರಭಾವಶಾಲಿ ಎಂಟ್ರಿ ಗಮನ ಸೆಳೆದಿದೆ. ಆಂಥೋನಿ ಸ್ಯಾಮ್ಸನ್ ಅವರ ಕ್ಯಾಮರಾವರ್ಕ್ ಮತ್ತು ಸ್ಯಾಮ್ ಸಿಎಸ್ ಅವರ ಸಂಗೀತ ದೃಶ್ಯಗಳಿಗೆ ಮತ್ತಷ್ಟು ಬಲ ತುಂಬಿದೆ.
ಸಮರ್ಜಿತ್ ಲಂಕೇಶ್ ಪ್ರಮುಖ ಪಾತ್ರದಲ್ಲಿ
ಕನ್ನಡದ ಯುವ ನಟ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಂದೆ-ಮಗನ ಬಾಂಧವ್ಯದ ಭಾಗವಾಗಿ ಮೋಹನ್‌ಲಾಲ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವುದು ಕನ್ನಡ ಪ್ರೇಕ್ಷಕರಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದೆ.
ರನ್ನ ಚಿತ್ರದ ಮೂಲಕ ಖ್ಯಾತಿ ಪಡೆದ ನಂದ ಕಿಶೋರ್, ಈ ಬಾರಿ ವೃಷಭ ಚಿತ್ರದ ಮೂಲಕ ಹೊಸ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಕತೆ ಮತ್ತು ನಿರ್ದೇಶನ ಎರಡನ್ನೂ ನಂದ ಕಿಶೋರ್ ತಾವೇ ನಿರ್ವಹಿಸಿದ್ದು, ಇದು ಅವರಿಗೇ ವಿಶೇಷವಾದ ಪ್ರಾಜೆಕ್ಟ್ ಆಗಿದ್ದು, ವೃಷಭ ಚಿತ್ರವನ್ನು ಈ ವರ್ಷದ ದೀಪಾವಳಿ ಹಬ್ಬದಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ.