ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸೆಪ್ಟೆಂಬರ್ 2ರಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಎಲ್ಲೆಡೆಯಿಂದ ಶುಭಾಶಯಗಳ ಮಳೆ ಸುರಿಯುತ್ತಿದೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಮಾನವಾಗಿ ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್‌ಗಾಗಿ ಅಭಿಮಾನಿಗಳು ಯಾವಾಗಲೂ ವಿಶೇಷ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಈ ಬಾರಿ ಅವರ ಬರ್ತ್‌ಡೇ ಇನ್ನಷ್ಟು ಸಂಚಲನ ಮೂಡಿಸಿದೆ. ಕಾರಣ, ಅವರ ಮುಂದಿನ ಸಿನಿಮಾ ‘ಒಜಿ’ ಚಿತ್ರದ ಮೊದಲ ಟಿಕೆಟ್ ಹರಾಜಿನಲ್ಲಿ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
‘ಒಜಿ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 25ರಂದು ರಿಲೀಸ್‌ಗೆ ಸಿದ್ಧವಾಗಿದೆ. ಪವನ್ ಕಲ್ಯಾಣ್ ಜನ್ಮದಿನದ ಅಂಗವಾಗಿ ನಡೆದ ಹರಾಜಿನಲ್ಲಿ ಚಿತ್ರದ ಮೊದಲ ಟಿಕೆಟ್ ಅಭಿಮಾನಿಗಳ ಕೈ ಸೇರಿದೆ. ಸಾಮಾನ್ಯವಾಗಿ ಸಿನಿಮಾ ಟಿಕೆಟ್‌ಗಳು ನೂರಾರು ಅಥವಾ ಸಾವಿರಗಳಲ್ಲಿ ಮಾರಾಟವಾಗುತ್ತವೆ. ಆದರೆ ಈ ಬಾರಿ ಅಭಿಮಾನಿಯೊಬ್ಬರು 5 ಲಕ್ಷ ರೂಪಾಯಿ ನೀಡಿ ಟಿಕೆಟ್ ಖರೀದಿಸಿರುವುದು ಟಾಲಿವುಡ್ ವಲಯದಲ್ಲಿ ದೊಡ್ಡ ಸುದ್ದಿಯಾಗಿದೆ.
ಯಾರು ಖರೀದಿಸಿದರು?
ಈ ವಿಶೇಷ ಟಿಕೆಟ್ ಅನ್ನು ಉತ್ತರ ಅಮೆರಿಕದ “ಟೀಮ್ ಕಲ್ಯಾಣ್ ಸೇನಾ” ಖರೀದಿಸಿದೆ. ಅಭಿಮಾನಿಗಳ ಪ್ರೀತಿಯಷ್ಟೇ ಅಲ್ಲದೆ, ಪವನ್ ಕಲ್ಯಾಣ್‌ರ ಜನಪ್ರಿಯತೆಯ ಮಟ್ಟವನ್ನು ತೋರಿಸುವಂತಿದೆ. ಮುಖ್ಯವಾಗಿ, ಈ ಹಣ ಚಿತ್ರತಂಡಕ್ಕೆ ಸೇರದೇ, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ನಿಧಿಗೆ ಸೇರುತ್ತದೆ. ನಂತರ ಇದನ್ನು ಸಾರ್ವಜನಿಕ ಸೇವಾ ಕಾರ್ಯಗಳಿಗೆ ಬಳಸಲಾಗುತ್ತದೆ ಎಂಬುದು ವಿಶೇಷ.
‘ಒಜಿ’ ದೊಡ್ಡ ಬಜೆಟ್‌ನಲ್ಲಿ ತಯಾರಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಆದರೆ ಈ ಸಿನಿಮಾ ನಿರಂತರವಾಗಿ ವಿಳಂಬವಾಗುತ್ತಾ ಬಂದಿದ್ದರಿಂದ ಅಭಿಮಾನಿಗಳು ನಿರಾಶರಾಗಿದ್ದರು. ಈಗ ಬಿಡುಗಡೆ ದಿನಾಂಕ ಫೈನಲ್ ಆಗಿದ್ದು, ಕೇವಲ ಮೂರು ದಿನಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಹೀಗಾಗಿ ನಿರೀಕ್ಷೆಯ ಮಟ್ಟ ಇನ್ನಷ್ಟು ಏರಿದೆ.