ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಮೇಘಸ್ಫೋಟದ ಭಾರಿ ಮಳೆ ಪ್ರವಾಹಕ್ಕೆ ಡೆಹ್ರಾಡೂನ್ನಲ್ಲಿ 13 ಹಾಗೂ ಪಿಥೋರಗಡ್ ಮತ್ತು ನೈನಿತಾಲ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಘಟನೆಯಲ್ಲಿ 16 ಮಂದಿ ನಾಪತ್ತೆಯಾಗಿದ್ದು, ಪ್ರವಾಹಕ್ಕೆ ಸಿಲುಕಿದ 900 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೇಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಟನ್ಸ್ ನದಿಯ ಮಧ್ಯದಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಪ್ರವಾಹದ ನಡುವೆ ಸಿಲುಕಿದ್ದು, ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 8 ಜನರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಮತ್ತೊಂದು ಘಟನೆಯಲ್ಲಿ ಡಿಐಟಿ ಕಾಲೇಜು ಬಳಿ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಎಸ್‌ಡಿಆರ್‌ಎಫ್ ಸಿಬ್ಬಂದಿಗಳು ಅವಶೇಷಗಳಿಂದ ಮೃತದೇಹ ಹೊರತೆಗೆದಿದ್ದಾರೆ. ಸಹಸ್ತ್ರಧಾರಾದಲ್ಲಿ, ಮೂರು ಜನರು ಹಠಾತ್ ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದರೆ, ಮಸ್ಸೂರಿಯಲ್ಲಿ, ಮಳೆ ಸಂಬಂಧಿತ ಅವಘಡದಿಂದಾಗಿ ಕಾರ್ಮಿಕರೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.