ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನೀಡಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ 3,300 ರೂ. ಹಾಗೂ ರಾಜ್ಯ ಸರ್ಕಾರ 200 ರೂ. ನೀಡಿ, ರೈತರ ಬೇಡಿಕೆ ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯದ ಕಬ್ಬು ಬೆಳೆಗಾರರು ನ್ಯಾಯ ಸಮ್ಮತ ಬೆಲೆ ನಿಗದಿ ಆಗಬೇಕೆಂದು ಏಳನೇ ದಿನ ಹೋರಾಟ ಮಾಡುತ್ತಿದ್ದಾರೆ. ವ್ಯಾಪಕ ಹೋರಾಟ ಆಗುತ್ತಿದೆ. ನಾನು ಈಗಾಗಲೇ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದೇನೆ. ಆದರೆ, ಸಿಎಂ ರೈತರ ಬಗ್ಗೆ ಅಸಡ್ಡೆ ಭಾವನೆ ವ್ಯಕ್ತಪಡಿಸಿ ತಮ್ಮ ರಾಜಕಾರಣವನ್ನು ಸಿಎಂ ಸ್ಥಾನ ಉಳಿಸಿಕೊಳ್ಳಲು ಸಮಯ ಸಿಗುತ್ತಿಲ್ಲ. ಹೀಗಾಗಿ, ರೈತರ ಸಮಸ್ಯೆ ಪರಿಹರಿಸಲು ಅವರಿಗೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರೈತರ ಕಬ್ಬು ಬೆಳೆಗಾರರ ಸಮಸ್ಯೆ ಪ್ರತಿ ವರ್ಷ ಆಗುತ್ತಿರುವುದು ಗಮನಾರ್ಹ. ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಮಾಡಿದ ನಂತರ ಸಕ್ಕರೆ ಕಾರ್ಖಾನೆಗಳು ಎಥೆನಾಲ್, ವಿದ್ಯುತ್ ಸೇರಿದಂತೆ ಇತರೆ ಉಪ ಉತ್ಪನ್ನ ತಯಾರಿಸುತ್ತಾರೆ. ಹೀಗಾಗಿ ರೈತರು ಕೇಳುವ ದರವನ್ನು ನೀಡಲು ಸಾಧ್ಯವಿದೆ. ರಾಜ್ಯ ಸರ್ಕಾರ ಕಬ್ಬಿನ ದರವನ್ನು ನಿಗದಿ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಕಾನೂನು ಪ್ರಕಾರ ದರ ನಿಗದಿ ಮಾಡಲು ಅಧಿಕಾರ ಇದೆ. ರೈತರ ಬೇಡಿಕೆ ತಕ್ಕಂತೆ ದರ ನಿಗದಿ ಮಾಡಿ ಸರ್ಕಾರ ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಬ್ಬಿನ ದರ ನಿಗದಿಪಡಿಸಲು ತಕ್ಷಣ ಸಿಎಂ ಮಧ್ಯ ಪ್ರವೇಶಿಸಲಿ: ಬೊಮ್ಮಾಯಿ

