Tuesday, October 28, 2025

ನಾಳೆ ಕಲಬುರಗಿಗೆ ಸಿಎಂ ಭೇಟಿ: ಪ್ರವಾಹ ಹಾನಿ ವೈಮಾನಿಕ ಸಮೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕರ್ನಾಟಕದಲ್ಲಿ ನಿರಂತರ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಸಿಎಂ ಅವರು ಕಲಬುರಗಿ ವಿಮಾನ ನಿಲ್ದಾಣದಿಂದ ಸಮೀಕ್ಷೆ ಪ್ರಾರಂಭಿಸಿ, ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯಲಿದೆ.

ಕಾಗಿಣಾ ನದಿ ಪ್ರವಾಹದಿಂದ ಸೇಡಂ ತಾಲೂಕಿನ ಮಳಖೇಡ ತಾಂಡಾದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿ ಶಿಶುವಿನೊಂದಿಗೆ ತಾಯಿ ಎರಡು ದಿನಗಳಿಂದ ಛಾವಣಿ ಮೇಲೆ ಆಶ್ರಯ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ಜೇವರ್ಗಿ ತಾಲೂಕಿನ ಮಾಹೂರ ಗ್ರಾಮ ಪ್ರವಾಹದಿಂದ ಸುತ್ತುವರಿಯಲ್ಪಟ್ಟಿದ್ದು, ಶಾಸಕ ಡಾ. ಅಜಯ್ ಸಿಂಗ್ ಬೋಟ್‌ನಲ್ಲಿ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

ಚಿಂಚೋಳಿ ತಾಲೂಕಿನ ಜೆಟ್ಟೂರ್ ಗ್ರಾಮದಲ್ಲಿ ಹಳ್ಳದ ನೀರು ಕೊಟ್ಟಿಗೆ ಪ್ರವೇಶಿಸಿ 42 ಎತ್ತುಗಳು ಹಾಗೂ ಐದು ಜಾನುವಾರು ಸಾವಿಗೀಡಾಗಿವೆ. ಯಾದಗಿರಿಯ ಭೀಮಾ ನದಿ ತೀರ ಪ್ರದೇಶಗಳು ಕೂಡಾ ಹಾನಿಗೊಳಗಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀರೇಹಳ್ಳದ ಸೇತುವೆ ಮುಳುಗಡೆಯಿಂದ ಯಾದಗಿರಿ-ಕಲಬುರಗಿ ಮಾರ್ಗ ಬಂದ್ ಆಗಿದೆ. ಬೀದರ್‌ನ ಭಾಲ್ಕಿ ಭಾಗದಲ್ಲಿಯೂ ಪ್ರವಾಹ ಉಂಟಾಗಿ ಸಾವಿರಾರು ಎಕರೆ ಬೆಳೆ ನೀರುಪಾಲಾಗಿದೆ.

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದ ಉಂಟಾದ ಹಾನಿ ಜನಜೀವನಕ್ಕೆ ಭಾರೀ ಹೊಡೆತ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಸಮೀಕ್ಷೆ ಬಳಿಕ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಲಾಗುವುದು ಎಂಬ ನಿರೀಕ್ಷೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

error: Content is protected !!